Monday, July 1, 2024

ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಅರೆಸ್ಟ್​: ಬಂಧನ ಭೀತಿಯಲ್ಲಿ ಭವಾನಿ

ಬೆಂಗಳೂರು: ಮಹಿಳೆ ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಕಾರು ಚಾಲಕ ಅಜಿತ್‌ನನ್ನು SIT ಅಧಿಕಾರಿಗಳು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆ ಕಿಡ್ನಾಪ್​ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ನೋಟೀಸ್​ ಕೊಟ್ಟರೂ ಅಜಿತ್‌ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ವಿಶೇಷ ತನಿಖಾ ತಂಡ ಪೊಲೀಸರು ಹೊಳೆನರಸೀಪುರದಲ್ಲಿರುವ ಅಜಿತ್ ನಿವಾಸಕ್ಕೆ ತೆರಳಿ ಸಮನ್ಸ್ ಜಾರಿ ಮಾಡಿದ್ದರು.

ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ತನ್ನದೇ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಅನ್ನೋ ಮಾಹಿತಿಯ ಜೊತೆಗೆ ರೇವಣ್ಣ ನಿರೀಕ್ಷಣಾ ಜಾಮೀನು ವಿಚಾರಣೆ ದಿನ ಸಂತ್ರಸ್ತ ಮಹಿಳೆಯ ವೀಡಿಯೋ ಚಿತ್ರೀಕರಣ ಮಾಡಿದ್ದು ಇದೇ ಅಜಿತ್ ಅನ್ನೋ ಮಾಹಿತಿ ಇತ್ತು. ಹೀಗಾಗಿಯೇ ಅಜಿತ್ ನನ್ನು ಎಸ್‍ಐಟಿಯವರು ಹುಡುಕಾಟ ನಡೆಸಿದ್ದರು. ಬಳಿಕ ಚಿಕ್ಕಮಗಳೂರಿನಲ್ಲಿರುವ ಕುರಿತು ಖಚಿತ ಮಾಹಿತಿ ಮೇರೆಗೆ SIT ಅಧಿಕಾರಿಗಳು ಅಜಿತ್​ನನ್ನು ಬಂಧಿಸಿದ್ದಾರೆ.

ಭವಾನಿ ರೇವಣ್ಣಗೆ ಬಂಧನ ಭೀತಿ:

ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಭವಾನಿ ರೇವಣ್ಣ ಬಂಧನ ಸಾಧ್ಯತೆ ಇದೆ. ಬಂಧನ ಭೀತಿ ನಡುವೆ ಇಂದು ಎಸ್ಐಟಿ ಎದುರು ಹಾಜರಾಗ್ತಾರಾ ಭವಾನಿ ಎಂಬುದು ಕುತೂಹಲ ಮೂಡಿಸಿದೆ. ಇಂದು ಭವಾನಿ ರೇವಣ್ಣ ವಿಚಾರಣೆಗಾಗಿ ಹೊಳೆನರಸೀಪುರಕ್ಕೆ ಎಸ್‌ಐಟಿ ತಂಡ ಆಗಮಿಸಲಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ 6 ದಿನಗಳ ಕಾಲ SIT ಕಸ್ಟಡಿಗೆ: ಕೋರ್ಟ್​ ತೀರ್ಪು

ಭವಾನಿ ರೇವಣ್ಣ ಮೇ 15 ರಂದು ಎಸ್ಐಟಿಗೆ ಲಿಖಿತ ಪತ್ರ ನೀಡಿದ್ದರು. ಕಿಡ್ನ್ಯಾಪ್ ಆರೋಪ ಪ್ರಕರಣದಲ್ಲಿ ತಮ್ಮ ತನಿಖೆ ಅವಶ್ಯಕತೆ ಇದ್ದರೆ ತಾವು ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇರುವುದಾಗಿ ಹೇಳಿದ್ದರು. ಭವಾನಿ ಅವರ ಪತ್ರವನ್ನೇ ಉಲ್ಲೇಖಿಸಿ ಎಸ್‌ಐಟಿ ಶುಕ್ರವಾರ ಮತ್ತೊಂದು ನೋಟಿಸ್‌ ನೀಡಿದೆ. ಪ್ರಕರಣ ಸಂಬಂಧ ತಮ್ಮ ವಿಚಾರಣೆ ಅಗತ್ಯ ಇದೆ. ಹಾಗಾಗಿ ಜೂ.1 ರಂದು ವಿಚಾರಣೆಗೆ ಬರುವುದಾಗಿ ತಿಳಿಸಿತ್ತು. ಇಂದು ಮಹಿಳಾ ಅಧಿಕಾರಿಗಳ ಜೊತೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೆ ವಿಚಾರಣೆಗೆ ಆಗಮಿಸುವ ಬಗ್ಗೆ ನೋಟಿಸ್‌ನಲ್ಲಿ ತಿಳಿಸಿತ್ತು.

ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ನಡುವೆ ನೀವು ತಿಳಿಸಿದ ವಿಳಾಸಕ್ಕೆ ಬರುತ್ತೇವೆ. ಈ ಸಮಯದಲ್ಲಿ ನೀವು ಖುದ್ದು ಹಾಜರಿರಬೇಕು ಎಂದು ಎಸ್‌ಐಟಿ ಸೂಚಿಸಿತ್ತು. ಎಸ್‌ಐಟಿ ಮುಂದೆ ಹಾಜರಾದರೆ ಬಹುತೇಕ ಬಂಧನ ಖಚಿತ ಎನ್ನಲಾಗುತ್ತಿದೆ.

RELATED ARTICLES

Related Articles

TRENDING ARTICLES