Thursday, July 4, 2024

ಒಂದು ಪೆನ್​ಡ್ರೈವ್ ಬಗ್ಗೆ ಮಾತನಾಡಿದರೆ ಹತ್ತಾರು ಪೆನ್​ಡ್ರೈವ್​ಗಳು ಹೊರ ಬರುತ್ತೆ: ವಾಟಾಳ್​ ನಾಗರಾಜ್​

ಮಂಡ್ಯ: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಪೆನ್‌ಡ್ರೈವ್ ಬಗ್ಗೆ ಮಾತಾಡಿದ್ರೆ, ಹತ್ತಾರು ಪೆನ್‌ಡ್ರೈವ್ ಬರ್ತಾವೆ. ಯಾವುದರ ಬಗ್ಗೆ ಮಾತಾಡೋದು, ಯಾರ ಬಗ್ಗೆ ಮಾತಾಡೋದು.
ಮಾತಾಡಿದ್ರೆ ಎಲ್ಲಾ ಪಕ್ಷದವರ ಬಗ್ಗೆ ಮಾತಾಡಬೇಕಾಗುತ್ತೆ. ಈ ಪ್ರಕರಣ ಹೋಗ್ತಾ ಹೋಗ್ತಾ ಬೇರೆ ಕಡೆ ಹೋಗುತ್ತೆ. ಊರೆಲ್ಲಾ ಕಳ್ಳರು ಇದ್ದಾರೆ, ಕಳ್ಳನನ್ನು ಹಿಡಿಯೋದು ಹೇಗೆ? ಎಂದರು.

1962ರಲ್ಲಿ ಮಧುಗಿರಿಯ ಪೊಲೀಸ್ ಠಾಣೆಯಲ್ಲಿ ರೇಪ್ ಆಗಿತ್ತು. ಆಗ ಗೃಹಮಂತ್ರಿ ಎಂ.ಇ.ರಾಮರಾವ್ ಆಗಿದ್ದರು. ಆ ವೇಳೆ ಅವರ ಇಲಾಖೆಯ ಲೋಪದ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದ್ದರು.
ಆ ಕಾಲದ ರಾಜಕಾರಣಿಗಳು ಈಗ ಇಲ್ಲ. ಈಗ ಪರಿಸ್ಥಿತಿ ತುಂಬಾ ಹಾಳಾಗಿದೆ. ಚುನಾವಣೆಯಲ್ಲಿ‌ ದುಡ್ಡು ಮಾತ್ರ ಬೇಕಾಗಿದೆ. ಅನಾಚಾರ ಮಾಡಿದ್ರು ಸಹ ಅಂತವರಿಗೇ ಟಿಕೆಟ್ ನೀಡ್ತಾರೆ. ಚುನಾವಣೆಗಳಲ್ಲಿ ಕುಟುಂಬ ರಾಜಕೀಯ ಬಂದಿದೆ ಎಂದರು.

ಇದನ್ನು ಓದಿ: ಹೆಚ್‌ಡಿಕೆ ಅಣ್ಣನ ಮಗ ರೇಪ್‌ ಮಾಡಿದ್ದಾನೆ, ಕುಮಾರಸ್ವಾಮಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ: ಸಿಎಂ

25 ವರ್ಷದಿಂದ ಇಡೀ ದೇಶ, ರಾಜ್ಯ ಚುನಾವಣೆ ವ್ಯವಸ್ಥೆಯಲ್ಲಿ ಹಾಳಾಗಿವೆ. ಪ್ರಾಮಾಣಿಕ ರಾಜಕಾರಣಿಗಳು ಬರ್ತಾ ಇಲ್ಲ. ಎಲ್ಲರೂ ಕಳ್ಳರು ಇರುವಾಗ ಪ್ರಜ್ವಲ್‌ನ ಹೇಗೆ ಹಿಡಿಯುತ್ತಾರೆ. ಊರೆಲ್ಲಾ ಕಳ್ಳರೇ ಇರುವಾಗ ಕಳ್ಳನನ್ನು ಯಾರು ಹಿಡಿಯುತ್ತಾರೆ. ಎಂದು ಪ್ರಶ್ನೆ ಮಾಡಿದರು.

ಇಡೀ ಪ್ರಪಂಚಕ್ಕೆ ಪೆನ್‌ಡ್ರೈವ್ ಪ್ರಕರಣ ಕೆಟ್ಟ ಸಂದೇಶ ಕೊಟ್ಟಿದೆ. ರಾಜಕಾರಣಿಗಳು ಪ್ರಾಮಾಣಿಕರಾಗಿದ್ದರೆ, ಕರ್ನಾಟಕದ ಎಂಪಿ, ಎಂಎಲ್‌ಎ ಎಲ್ಲರೂ ರಾಜೀನಾಮೆ ಕೊಡಬೇಕಾಗಿತ್ತು. ಒಂದೂವರೆ ತಿಂಗಳಿಂದ ಪೆನ್‌ಡ್ರೈವ್ ಪ್ರಕರಣದ್ದೇ ಸುದ್ದಿಯಾಗಿದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES