Monday, May 20, 2024

ಬಸವಣ್ಣ ನುಡಿದಂತೆ ನಾವು ನಡೆಯೋಣ : ನಾಡಿನ ಜನತೆಗೆ ಸಿದ್ದರಾಮಯ್ಯ ಸಂದೇಶ

ಬೆಂಗಳೂರು : ಸಾಂಸ್ಕೃತಿಕ ನಾಯಕ ಮತ್ತು ನನ್ನ ವೈಚಾರಿಕ ಗುರು ಬಸವಣ್ಣನವರು ನುಡಿದಂತೆ ನಾವು ನಡೆಯೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಸವ ಜಯಂತಿ ಪ್ರಯುಕ್ತ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಾಡಿನ ಸಮಸ್ತ ಬಂಧುಗಳಿಗೆ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಾಯಕ ಮತ್ತು ನನ್ನ ವೈಚಾರಿಕ ಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಕೋಮುವಾದ, ಜಾತಿ ತಾರತಮ್ಯ, ಮೂಢನಂಬಿಕೆ, ಸುಳ್ಳು, ಮೋಸ ಮೊದಲಾದ ಸಾಮಾಜಿಕ ಪಿಡುಗುಗಳ ವಿರುದ್ಧದ ಹೋರಾಟದಲ್ಲಿ ಬಸವತತ್ವಗಳೇ ನಮ್ಮ ಪ್ರತಿ ಅಸ್ತ್ರಗಳು. ಇದರ ಮೂಲಕವಷ್ಟೇ ಸಂವಿಧಾನದ ಮೂಲ ಆಶಯವಾದ ಸಮಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

ಬಸವಣ್ಣನ ಜಯಂತಿಯ ದಿನ ನಾವೆಲ್ಲರೂ ಮತ್ತೊಮ್ಮೆ ಬಸವಣ್ಣನವರ ತತ್ವ, ಸಿದ್ಧಾಂತದ ಮನನ ಮಾಡಿಕೊಳ್ಳೋಣ. ಬಸವಣ್ಣ ನುಡಿದಂತೆ ನಾವು ನಡೆಯೋಣ. ಸಮಸಮಾಜ ನಿರ್ಮಾಣದ ಬಗ್ಗೆ ಬಸವಣ್ಣ ಕಂಡ ಕನಸನ್ನು ಸಾಕಾರಗೊಳಿಸಲು ಒಂದಾಗಿ ಕೈಜೋಡಿಸೋಣ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಬಸವಣ್ಣರ ತತ್ವಾದರ್ಶಗಳೇ ದಾರಿದೀಪ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಬಸವ ಜಯಂತಿಯ ಶುಭಾಶಯ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು. ದಯವಿಲ್ಲದ ಧರ್ಮವದಾವುದಯ್ಯ, ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಸಮಾನತೆ ಸಾರಿದ ಶ್ರೇಷ್ಠ ಶರಣರು, ಕ್ರಾಂತಿಯೋಗಿ, ವಿಶ್ವಗುರು ಶ್ರೀ ಬಸವಣ್ಣನವರ ತತ್ವಾದರ್ಶಗಳು ನಮಗೆಲ್ಲಾ ದಾರಿದೀಪವಾಗಿವೆ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES