Tuesday, May 14, 2024

ಪ್ರಧಾನಿ ಮೋದಿಗೆ ಸಂವಿಧಾನ ಗೊತ್ತಿಲ್ಲ, ಸಂವಿಧಾನದ ಬಗ್ಗೆ ಗೌರವವಿಲ್ಲ : ಸಿದ್ದರಾಮಯ್ಯ

ರಾಯಚೂರು : ಪ್ರಧಾನಿ ನರೇಂದ್ರ ‌ಮೋದಿಗೆ ಸಂವಿಧಾನ ಗೊತ್ತಿಲ್ಲ. ಸಂವಿಧಾನದ ಬಗ್ಗೆ ಬಿಜೆಪಿಯವರಿಗೆ ಗೌರವವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಯಚೂರಿನ ಸಿಂಧನೂರಿನಲ್ಲಿ ನಡೆದ ಕಾಂಗ್ರೆಸ್​ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ‌. ನಾವು ನಿಮ್ಮ ಮತ ಕೇಳುವ ನೈತಿಕತೆ ಉಳಿಸಿಕೊಂಡಿದ್ದೇನೆ. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೀವಿ ಎಂದು ಹೇಳಿದರು.

10 ವರ್ಷದಲ್ಲಿ ಪ್ರಧಾನಿ ಮೋದಿ ಸಂಪೂರ್ಣ ವಿಫಲವಾಗಿದ್ದಾರೆ. 2024 ರಲ್ಲಿ ಮೋದಿ ಬೆತ್ತಲೆಯಾಗಿದ್ದಾರೆ. ಮೋದಿ‌ ಹೇಳುವುದೆಲ್ಲಾ ಸುಳ್ಳು ಅನ್ನೋದು ಜನಕ್ಕೆ ಗೊತ್ತಾಗಿದೆ. ಹಿಂದುಳಿದವರ ಮೀಸಲಾತಿಯನ್ನ ಕಿತ್ತು, ಮುಸ್ಲಿಮರಿಗೆ ಕೊಡ್ತಾರೆ ಅಂತ ಹಸಿ ಸುಳ್ಳು ಹೇಳುತ್ತಿದ್ದಾರೆ. ನಾವು ಯಾವತ್ತೂ ಮೀಸಲಾತಿ ಬದಲಾವಣೆ ಮಾಡುವ ಕೆಲಸ ಮಾಡಿಲ್ಲ ಎಂದು ಕುಟುಕಿದರು.

ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿನಾ ನೋಡಿಲ್ಲ

ಹಿಂದುಳಿದವರನ್ನ, ದಲಿತರನ್ನ ಮುಸ್ಲಿಮರ ಮೇಲೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ 4% ಮೀಸಲಾತಿ ರದ್ದು ಮಾಡಿದ್ರು. ನ್ಯಾಯಾಲಯದಲ್ಲಿ ಅದೇ ಬಸವರಾಜ ಬೊಮ್ಮಾಯಿ ಮೀಸಲಾತಿ ಮುಂದುವರೆಸುತ್ತೇವೆ ಅಂತ ಅಫಿಡೆವಿಟ್ ಕೊಟ್ಟಿದ್ದಾರೆ. ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿಯನ್ನ ನೋಡಿಲ್ಲ ಎಂದು ಕಿಡಿಕಾರಿದರು.

ಪಕೋಡ, ಬೋಂಡಾ ಮಾರಲು ಹೋಗಿ ಅಂತಾರೆ

ಇವತ್ತು ನಾಲ್ಕು ಕಡೆ ಮಾತನಾಡಿದ್ದಾರೆ. ನಾನು ಅಭಿವೃದ್ಧಿ ಮಾಡಿದ್ದೇನೆ ಅಂತಾರೆ, ಏನು ಅಂತ ಹೇಳಲ್ಲ. ಕಪ್ಪು ಹಣ ನೂರು ದಿನದಲ್ಲಿ ತಂದು, ಎಲ್ಲಾ ಕುಟುಂಬಗಳಿಗೆ ಅಕೌಂಟ್‌ಗೆ 15 ಲಕ್ಷ ಹಾಕ್ತಿನಿ ಅಂದಿದ್ರು ಬಂತಾ? ನಿರುದ್ಯೋಗ ಸಮಸ್ಯೆ ಬಗೆಹರಿಸಲು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂದ್ರು. 10 ವರ್ಷ ಆಯ್ತು ಈವರೆಗೆ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಅನೇಕ ಯುವಕರು ನಂಬಿದ್ದಾರೆ. ಆದ್ರೆ, 20 ಲಕ್ಷ ಉದ್ಯೋಗ ಸೃಷ್ಟಿಸಲು ಆಗಿಲ್ಲ. ಕೆಲಸ ಕೇಳಿದರೆ ಪಕೋಡ, ಬೋಂಡಾ ಮಾರಲು ಹೋಗಿ ಅಂತ ಹೇಳ್ತಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

RELATED ARTICLES

Related Articles

TRENDING ARTICLES