Saturday, May 11, 2024

ಚುನಾವಣೆಯಲ್ಲಿ ಗೆಲ್ಲಲಾಗದವರು ರಾಜ್ಯಸಭೆಯ ಹಾದಿ ಹಿಡಿದಿದ್ದಾರೆ : ಸೋನಿಯಾಗೆ ಮೋದಿ ಕುಟುಕು

ಬೆಂಗಳೂರು : ನೇರವಾಗಿ ಚುನಾವಣೆಯಲ್ಲಿ ನಿಂತು ಗೆಲ್ಲಲು ಸಾಧ್ಯವಾಗದವರು ರಾಜ್ಯಸಭೆ ಮೂಲಕ ಸಂಸತ್ತು ಪ್ರವೇಶಿಸಿದ್ದಾರೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಸೋನಿಯಾ ಗಾಂಧಿ ಕಳೆದ 20 ವರ್ಷದಿಂದ ರಾಯ್​ಬರೇಲಿ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದವರು. ಈ ಬಾರಿ ರಾಜಸ್ಥಾನದಿಂದ ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ. ಈ ರಾಜ್ಯದಿಂದ ರಾಜ್ಯಸಭೆಗೆ ಹೋದವರು ರಾಜ್ಯದ ಜನರಿಗಾಗಿ ಏನೂ ಕೆಲಸ ಮಾಡಲಿಲ್ಲ ಎಂದು ಕುಟುಕಿದ್ದಾರೆ.

ದಕ್ಷಿಣದಿಂದ ಒಬ್ಬ ಮುಖಂಡರನ್ನು ಇಲ್ಲಿಂದ ರಾಜ್ಯಸಭೆಗೆ ಕಳುಹಿಸಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನೀವು ರಾಜ್ಯಸಭೆಗೆ ಕಳುಹಿಸಿದಿರಿ. ಅವರನ್ನು ರಾಜ್ಯದಲ್ಲಿ ನೀವು ಮತ್ತೆಂದಾದರೂ ನೋಡಿದಿರಾ? ಈಗ ಪಕ್ಷದಿಂದ ಮತ್ತೊಬ್ಬ ಮುಖಂಡರನ್ನು ರಾಜ್ಯಸಭೆಗೆ ಕಳುಹಿಸಲಾಗಿದೆ. ನೇರ ಚುನಾವಣೆಗಳಲ್ಲಿ ಸ್ಪರ್ಧಿಸಲಾಗದವರು ಈ ಬಾರಿ ರಾಜಸ್ಥಾನಕ್ಕೆ ಬಂದಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಚುನಾವಣೆಗೆ ನಿಲ್ಲಿಸಲು ಅಭ್ಯರ್ಥಿಗಳೇ ಇಲ್ಲ

ಒಂದು ಕಾಲದಲ್ಲಿ 400 ಸೀಟು ಗೆದ್ದಿದ್ದ ಪಕ್ಷ, ಈಗ 300 ಸ್ಥಾನಗಳಲ್ಲಿ ಸ್ವಾತಂತ್ರವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಚುನಾವಣೆಗೆ ನಿಲ್ಲಿಸಲು ಅವರ ಬಳಿ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್ ಎಂದಿಗೂ ಭಾರತವನ್ನು ಬಲಿಷ್ಠಗೊಳಿಸಲು ಸಾಧ್ಯವಿಲ್ಲ, ಆ ಪಕ್ಷ ಅಸ್ಥಿರತೆಯ ಸಂಕೇತವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ದೇಶವು ಕಾಂಗ್ರೆಸ್ ವಿರುದ್ಧ ಕೋಪಗೊಂಡಿದೆ

ಕಾಂಗ್ರೆಸ್​ ಮಾಡಿದ ಪಾಪಗಳಿಗೆ ಜನ ಈಗ ಶಿಕ್ಷಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ನಡೆದ ಮೊದಲ ಹಂತದ ಮತದಾನದಲ್ಲಿ ಕಾಂಗ್ರೆಸ್‌ಗೆ ಶಿಕ್ಷೆಯಾಗಿದೆ. 2014ರ ಮೊದಲು ಇದ್ದ ಪರಿಸ್ಥಿತಿಗಳು ಮರಳಿ ಬರುವುದನ್ನು ದೇಶ ಬಯಸುವುದಿಲ್ಲ. ಕಾಂಗ್ರೆಸ್ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಗೆದ್ದಲುಗಳನ್ನು ಹರಡುವ ಮೂಲಕ ದೇಶವನ್ನು ಟೊಳ್ಳು ಮಾಡಿದೆ. ಇಂದು ದೇಶವು ಕಾಂಗ್ರೆಸ್ ವಿರುದ್ಧ ಕೋಪಗೊಂಡಿದೆ. ಆ ಪಕ್ಷ ಮಾಡಿದ ಪಾಪಗಳಿಗೆ ಶಿಕ್ಷೆಯನ್ನು ನೀಡುತ್ತಿದೆ ಎಂದು ಮೋದಿ ಚಾಟಿ ಬಿಸಿದ್ದಾರೆ.

RELATED ARTICLES

Related Articles

TRENDING ARTICLES