Thursday, May 2, 2024

ಡಾ.ಕೆ. ಸುಧಾಕರ್ ಪರ ವಿಪಕ್ಷ ನಾಯಕ ಅಶೋಕ್ ಭರ್ಜರಿ ಪ್ರಚಾರ

ಚಿಕ್ಕಬಳ್ಳಾಪುರ : ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಡಾ.ಕೆ. ಸುಧಾಕರ್ ಪರ ವಿಪಕ್ಷ ನಾಯಕ ಆರ್. ಅಶೋಕ್ ಅಬ್ಬರದ ಪ್ರಚಾರ ನಡೆಸಿದರು.

ಕರ್ನಾಟಕ ಗಡಿ ಭಾಗ ಗೌರಿಬಿದನೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧ ವಿಧಾನ ಸಭಾ ಕ್ಷೇತ್ರಗಳಲ್ಲಿ ಆರ್​. ಅಶೋಕ್ ಮತಯಾಚನೆ ನಡೆಸಿದರು. ಆಂಧ್ರಪ್ರದೇಶದ ಬಿಜೆಪಿ ಸಂಸದ ಮಂದ ಕೃಷ್ಣ ಮಾದಿಗ ಮತ್ತು ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಅನೇಕ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಈ ವೇಳೆ ಇದ್ದರು.

ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಪ್ರಧಾನಿ ಮೋದಿ ಅಲೆ ಬೀಸುತ್ತಿದೆ. ಕಾಂಗ್ರೆಸ್ ಸರ್ಕಾರ 50 ವರ್ಷ ಸುದೀರ್ಘ ಆಡಳಿತ ನಡೆಸಿದೆ. ಆದ್ರೆ, ದೇಶದಲ್ಲಿ ಬಡವರು ಬಡವರಾಗಿಯೇ ಉಳಿದಿದ್ದಾರೆ. ಮೋದಿ ಆಡಳಿತಕ್ಕೆ ಬಂದ ನಂತರ 25 ಕೋಟಿ ಬಡ ಜನರನ್ನು ಬಡತನ ರೇಖೆಗಿಂತ ಮೇಲೆ ಎತ್ತುವ ಕೆಲಸ ಮಾಡಿದ್ದಾರೆ. ಇದನ್ನು ವಿಶ್ವಸಂಸ್ಥೆಯ ಅಧಿಕೃತ ವರದಿ ಮಾಡಿದೆ. ವಿಶ್ವ ಭೂಪಟದಲ್ಲಿ ಆರ್ಥಿಕವಾಗಿ 5ನೇ ಸ್ಥಾನಕ್ಕೆ ಏರಿದೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಗೆಲಿಸುವುದರ ಮೂಲಕ ಮೋದಿಯವರ ಕೈ ಬಲ ಪಡಿಸಬೇಕು ಎಂದು ಡಾ.ಕೆ. ಸುಧಾಕರ್ ಹೇಳಿದರು.

ಕಾಂಗ್ರೆಸ್ ಸರ್ಕಾರ ಬಂದ್ರೆ ದಾರಿದ್ರ್ಯ ಬರುತ್ತೆ

ಇದೇ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಬರಗಾಲ ಆವರಿಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ ಮಳೆ ಬರುತ್ತೆ, ಕಾಂಗ್ರೆಸ್ ಸರ್ಕಾರ ಬಂದ್ರೆ ದಾರಿದ್ರ್ಯ ಬರುತ್ತೆ. ಗಂಡನ ಹಣ ಕಿತ್ತು ಹೆಂಡತಿಗೆ ಕೊಡ್ತಿದ್ದಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.

.18ರಂದು ನಟ ಪವನ್ ಕಲ್ಯಾಣ್ ಪ್ರಚಾರ

ಇನ್ನೂ ಗಡಿ ಜಿಲ್ಲೆ ಹಿನ್ನೆಲೆಯಲ್ಲಿ ಡಾ.ಕೆ ಸುಧಾಕರ್ ತೆಲುಗಿನಲ್ಲಿ ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು. ಇದೇ ತಿಂಗಳು 18 ರಂದು ತೆಲುಗು ನಟ ಪವನ್ ಕಲ್ಯಾಣ್ ಮತ್ತು ಏ.20 ರಂದು ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ನಡುವೆ ಪ್ರಧಾನಿ ಮೋದಿ ಅವರು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.

ಒಟ್ಟಾರೆ, ಇಂದು ಸಹ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಾದ್ಯಂತ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುಧಾಕರ್ ಪ್ರಚಾರ ನಡೆಸಿದರು. ಲೋಕಸಭಾ ಕ್ಷೇತ್ರದ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ಮತದಾರರ ಮನ ಗೆದ್ದು ಪಾರ್ಲಿಮೆಂಟ್​ಗೆ ಹೋಗುವ ಭರವಸೆಯಲ್ಲಿ ಸುಧಾಕರ್ ಇದ್ದಾರೆ.

RELATED ARTICLES

Related Articles

TRENDING ARTICLES