Saturday, May 4, 2024

ಕಾಂಗ್ರೆಸ್ ನದ್ದು ಬೇಜವಾಬ್ದಾರಿ ಪ್ರಣಾಳಿಕೆ, ನಮ್ಮದು ಬಡವರಿಗೆ ಬದುಕು ಕಟ್ಟಿ ಕೊಡುವ ಪ್ರಣಾಳಿಕೆ

ಗದಗ : ನಮ್ಮದು ಬಡವರಿಗೆ ಬದುಕು ಕಟ್ಟಿಕೊಡುವ ಪ್ರಣಾಳಿಕೆ ಶಾಶ್ವತವಾಗಿ ದೇಶವನ್ನು ಕಟ್ಟುವಂತದ್ದು ಮತ್ತು ಬಡತನ ನಿರ್ಮೂಲನೆ ಮಾಡುವುದೇ ನಮ್ಮ ಗುರಿ ಎಂದು ಮಾಜಿ ಸಿಎಂ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಗದಗ ನಗರದಲ್ಲಿಂದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷದಲ್ಲಿ ಈಗಾಗಲೇ 15 ಕೋಟಿ ಜನರ ಬಡತನ ನಿರ್ಮೂಲನೆಯಾಗಿದೆ. ಇನ್ನೂ 25 ಕೋಟಿ ಜನರ ಬಡತನ ನಿರ್ಮೂಲನೆ ಮಾಡುವ ಗುರಿ ನಮ್ಮ ಪ್ರಣಾಳಿಕೆಯಲ್ಲಿದೆ. ಮೂಲಭೂತ ಸೌಕರ್ಯ, ಮನೆ, ಶೌಚಾಲಯ, ಶಾಶ್ವತವಾಗಿ ಕೊಡುತ್ತೇವೆ ಎಂದರು.

ವಿಶೇಷವಾಗಿ ಸೂರ್ಯ ಘರ್ ಯೋಜನೆ ಅಡಿ ಸೋಲಾರ್ ಎನರ್ಜಿಯಿಂದ ಉಚಿತ ವಿದ್ಯುತ್ ಪಡೆದು, ವಿದ್ಯುತ್ ಉತ್ಪಾದನೆ ಮಾಡಿ ಮಾರಾಟ ಮಾಡಬಹುದು. ರೈತರಿಗೆ ಅನುಕೂಲವಾಗುವಂತ ಯೋಜನೆ ಮುಂದುವರೆಸಲಾಗಿದೆ, ಹೆಣ್ಣು ಮಕ್ಕಳಿಗೆ ಲಕ್ಷ ಪತಿ ದೀದಿ ಯೋಜನೆಯಿದೆ.‌ ಅದನ್ನು 3 ಕೋಟಿ ಮಹಿಳೆಯರಿಗೆ ವಿಸ್ತರಿಸಲು ಭರವಸೆ ನೀಡಲಾಗಿದೆ. ಇದರಿಂದ ಹೆಣ್ಣು ಮಕ್ಕಳ ಸಬಲೀಕರಣವಾಗುತ್ತದೆ ಎಂದರು.

ಇದನ್ನೂ ಓದಿ: ಮೋದಿಯಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿ ಏನೇನಿದೆ ?

ಬಿಜೆಪಿ ಪ್ರಣಾಳಿಕೆ ಕುರಿತು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜನರ ಜೀವನ ಮಟ್ಟ ಹೆಚ್ಚಳ ಹಾಗೂ ಬಡತನ ನಿರ್ಮೂಲನೆ ಮಾಡುವ ಯೋಜನೆ ನಮ್ಮ ಪ್ರಣಾಳಿಕೆಯಲ್ಲಿವೆ. ಕಾಂಗ್ರೆಸ್ ನವರು ಬೇಕಾಬಿಟ್ಟಿಯಾಗಿ ಘೋಷಣೆ ಮಾಡಿದ್ದಾರೆ. ಅವರಿಗೆ ಜವಾಬ್ದಾರಿ ಇಲ್ಲಾ, ಯಾಕೆಂದರೆ ಅವರು

ಅಧಿಕಾರಕ್ಕೆ ಬರುವುದು ಗ್ಯಾರಂಟಿ ಇಲ್ಲಾ :
ಅವರು ಅಧಿಕಾರಕ್ಕೆ ಬರಲು 272 ಸೀಟ್ ಬೇಕು, ಅವರು ಸ್ಪರ್ಧೆ ಮಾಡಿರುವುದೇ 230 ಕ್ಷೇತ್ರದಲ್ಲಿ ಮಾತ್ರ. ಕಾಂಗ್ರೆಸ್ ಪ್ರಣಾಳಿಕೆ ಬೇಜವಾಬ್ದಾರಿ ಪ್ರಣಾಳಿಕೆ. ನಮ್ಮದು ಜವಾಬ್ದಾರಿಯುತ ಪ್ರಣಾಳಿಕೆ ಎಂದು ಬಸವರಾಜ್ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರಿಂದ ದೊಡ್ಡ ಸಂದೇಶ ರವಾನೆಯಾಗಲಿದೆ. ಮೋದಿ ಪ್ರಭಾವ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದ್ದಾರೆ. ಮೈಸೂರು ಭಾಗದಲ್ಲಿ ಗೆಲುವು ನಿಶ್ಚಿತ ಇದೆ. ಆದರೆ, ಲೀಡ್ ಹೆಚ್ಚಿಸುವ ಕೆಲಸ ಮೋದಿ ಅವರು‌ ಮಾಡುತ್ತಾರೆ ಎಂದರು.

ಸಂಸದ ಶ್ರೀನಿವಾಸ ಪ್ರಸಾದ್ ಪ್ರಚಾರಕ್ಕೆ ಆಗಮಿಸದಿರುವುದರಿಂದ ನಮಗೆ ಹಿನ್ನಡೆ ಆಗುವುದಿಲ್ಲ. ಅವರ ಆರೋಗ್ಯ ದೃಷ್ಠಿಯಿಂದ ಬಾರದಿರಬಹುದು. ನಮ್ಮ ನಾಯಕರಾದ ಯಡಿಯೂರಪ್ಪನವರು ಶ್ರೀನಿವಾಸ್ ಪ್ರಸಾದ್ ಜೊತೆ ಮಾತನಾಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಸ್ ವಿ ಸಂಕನೂರ, ಮಾಜಿ ಸಚಿವ ಸಿ ಸಿ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೇರಿ ಹಲವು ಮುಖಂಡರು ಹಾಜರಿದ್ದರು.

RELATED ARTICLES

Related Articles

TRENDING ARTICLES