Saturday, May 4, 2024

ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಸಿಂಹ ಘರ್ಜನೆ ಮಾಡುವೆ : ಬಸವರಾಜ ಬೊಮ್ಮಾಯಿ

ಹಾವೇರಿ : ಪ್ರಧಾನಿ ನರೇಂದ್ರ ಮೋದಿಯವರು ಬಲಿಷ್ಠ ನಾಯಕರಾಗಿದ್ದು, ಭಾರತ ಭಿಕ್ಷುಕರ ದೇಶವಲ್ಲ, ದಾನ ಮಾಡುವ ದೇಶ ಎಂದು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಮೋದಿಯವರು ರಾಜಕೀಯ ರಂಗದ ಪವರ್ ಸ್ಟಾರ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಸವಣೂರು ತಾಲೂಕಿನ ಕಳಸೂರು, ಹಿರೇಮಗದೂರು, ಡೊಂಬರ ಮತ್ತೂರು, ಹಿರೇ ಮರಳಿಹಳ್ಳಿ, ಇಚ್ಚಂಗಿ, ಹೆಸರೂರು ಗ್ರಾಮಗಳಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದರು. ಬಲಿಷ್ಟ ದೇಶಕ್ಕೆ ಬಲಿಷ್ಟ ನಾಯಕತ್ವ ಬೇಕು. ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಲಿಷ್ಠ ನಾಯಕರಾಗಿದ್ದಾರೆ ಎಂದು ಹೇಳಿದರು.

ಮೋದಿಯವರು ಪ್ರಧಾನಿ ಆಗುವ ಮೊದಲು ಗುಜರಾತ್ ಸಿಎಂ ಆಗಿದ್ದರು. ಅವರಿಗೆ ದೇಶದ ಚುಕ್ಕಾಣಿ ಹಿಡಿಯಲು ಅವಕಾಶ ಕಲ್ಪಿಸಲಾಯಿತು. ಅವರು ಏಕ ಭಾರತ ಶ್ರೇಷ್ಠ ಭಾರತ ಎಂದು ಸಾರಿದರು. ಇದು ಬಲಿಷ್ಠ ರಾಷ್ಟ್ರ ಎನ್ನುವ ಸಂದೇಶ ಸಾರಿದರು. ವಿದೇಶಗಳಿಗೆ ನಾವು ಭಿಕ್ಷೆ ಬೇಡುವವರಲ್ಲ, ದಾನ ಕೊಡುವವರು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ದೇಶದಲ್ಲಿ ದುರ್ಬಲ ನಾಯಕತ್ವ ಇದ್ದಾಗ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತವೆ. ಬಲಿಷ್ಟ ನಾಯಕತ್ವ ಇದ್ದರೆ ಎಲ್ಲರೂ ಹೆದರುತ್ತಾರೆ. ಮೋದಿಯವರು ರಷ್ಯಾ ಉಕ್ರೇನ್ ಯುದ್ದ ನಿಲ್ಲಿಸಿ ನಮ್ಮ ದೇಶದ 24 ಸಾವಿರ ಮಕ್ಕಳನ್ನು ರಕ್ಷಣೆ ಮಾಡಿ ಕರೆದುಕೊಂಡು ಬಂದರು. ಹೀಗಾಗಿ ರಾಜಕೀಯ ರಂಗದ ಪವರ್ ಸ್ಟಾರ್ ನರೇಂದ್ರ‌ ಮೋದಿಯವರು ಎಂದು ಹೇಳಿದರು.

ಇದನ್ನೂ ಓದಿ: ಮೋದಿ ವಿರುದ್ದ ಮಾತನಾಡಲು ಸಿಎಂ ಏನೂ ಇಲ್ಲದ್ದಕ್ಕೆ, ಸಂವಿಧಾನ ಬದಲಾವಣೆಯ ಭಯ ಹುಟ್ಟಿಸುತ್ತಾರೆ

ಸಾಮಾಜಿಕವಾಗಿಯೂ ಮೋದಿಯವರು ಸಾಕಷ್ಟು ಸಹಾಯ ಮಾಡಿದ್ದಾರೆ. ಎಲ್ಲರಿಗೂ 10 ಕೆಜಿ ಅಕ್ಕಿ ಕೊಟ್ಟರು. ಎಲ್ಲರಿಗೂ ಲಸಿಕೆ ಹಾಕಿಸಿದರು. ಉದ್ಯಮಿಗಳ ಸಾಲದ ಬಡ್ಡಿ ಮನ್ನಾ, ರೈತರ ಸಾಲದ ಬಡ್ಡಿ ಮಾಡಿದರು. ನಮ್ಮನ್ನು ಆಳಿದ ಬ್ರಿಟೀಷರಿಗೆ ಆಹಾರದ ಸಮಸ್ಯೆ, ವಿದ್ಯುತ್ ಸಮಸ್ಯೆ ಎದುರಾಗಿದೆ. ನಮ್ಮ ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮೋದಿಯವರು ನಾಲ್ಕು ಕೋಟಿ ಮನೆ ಕಟ್ಟಿಸಿದ್ದಾರೆ. ದೇಶದಲ್ಲಿ ನೂರು ಕೋಟಿ ಮನೆಗಳಿವೆ ಎಲ್ಲ ಮನೆಗಳಿಗೂ ಜಲ ಜೀವನ್ ಮಿಷನ್ ಮೂಲಕ ನಳದ ನೀರು ಕೊಡುತ್ತಿದ್ದಾರೆ. ನಾನು ಸಿಎಂ ಇದ್ದಾಗ ಹಾನಗಲ್, ಸವಣೂರು ತಾಲೂಕುಗಳಿಗೆ 480 ಕೊಟಿ ರೂ.ವೆಚ್ಚದ ಜಲ ಜೀವನ್ ಮಿಷನ್ ಯೋಜನೆಯನ್ನು ತಂಗುಭದ್ರಾ ನದಿಯಿಂದ ಸಿಂಗಟಾಲೂರು ಡ್ಯಾಮ್ ನಿಂದ ನೀರು ತಂದು ಯೋಜನೆ ಜಾರಿ ಮಾಡಲಾಗುತ್ತಿದೆ ಎಂದರು.

ಆರ್ಥಿಕ ಪರಿಸ್ಥಿತಿ ದಿವಾಳಿ :
ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆಡಳಿತ ಪಕ್ಷದ ಶಾಸಕರು ಅನುದಾನಕ್ಕೆ ಪತ್ರ ಕೊಟ್ಡರೆ, ಡಿಸಿಎಂ ಡಿ.ಕೆ ಶಿವಕುಮಾರ್ ಈ ವರ್ಷ ಪತ್ರ ಕೊಡಬೇಡಿ ಹಣ ಇಲ ಎಂದು ಹೇಳಿದ್ದಾರೆ. ಅವರು ಪ್ರತಿಪಕ್ಷದವರಿಗೆ ಬೇಡ ಅವರ ಪಕ್ಷದ ಶಾಸಕರಿಗೆ ಅನುದಾ‌ನ ಕೊಡಲಿ ಎಂದರು.

ಪ್ರತಿಪಕ್ಷದ ಶಾಸಕರ ಕ್ಷೇತ್ರಗಳಿಗೂ ವಿಶೇಷ ಅನುದಾನ :
ನಾನು ಸಿಎಂ ಆಗಿದ್ದಾಗ ಪ್ರತಿ ಪಕ್ಷದ ಶಾಸಕರ ಕ್ಷೇತ್ರಗಳಿಗೂ 25 ಕೋಟಿ ರೂ.ಅನುದಾನ ನೀಡಿದ್ದೆ. ಗ್ರಾಮ ಪಂಚಾಯತಿಗಳಿಗೆ ವಿಶೇಷ ಅನುದಾನ ನೀಡಿದ್ದೆ. ಇದು ಬಡವರ, ದಲಿತರ ವಿರೋಧಿ ಸರ್ಕಾರ. ಬರಗಾಲ ಬಂದರೂ ಒಂದು ಬೋರ್ ವೆಲ್ ಕೊರೆಯಲು ಹಣ ಕೊಡುತ್ತಿಲ್ಲ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೀಡಿದ್ದೇವೆ. ರೈತರಿಗೆ ಬೆಳೆ ಹಾನಿಗೆ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವೆ. ಇವರು ಎರಡು ಸಾವಿರ ರೂ. ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಬಹುತೇಕ ರೈತರಿಗೆ ಹಣ ತಲುಪಿಲ್ಲ ಎಂದರು.
ಈ ಚುನಾವಣೆಯಲ್ಲಿ ನನ್ನನ್ನು ಈ ಕ್ಷೇತ್ರದ ಸಂಸದನನ್ನಾಗಿ ಆಯ್ಕೆ ಮಾಡಿದರೆ, ನಿಮ್ಮ ಸೇವೆಯನ್ನು ಸಂಸತ್ತಿನಲ್ಲಿ ಸಿಂಹ ಗರ್ಜನೆ ರೀತಿಯಲ್ಲಿ ಮಾಡುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES