Tuesday, May 14, 2024

ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ 50 ಕೋಟಿ ಆಸ್ತಿ ಒಡೆಯ

ಕಲಬುರಗಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು 50 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಧಾಕೃಷ್ಣ ದೊಡ್ಡಮನಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಕುಟುಂಬದ ಆಸ್ತಿ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.

ರಾಧಾಕೃಷ್ಣ ಅವರು ತಮ್ಮ ಬಳಿ 2 ಲಕ್ಷ ರೂ. ಮತ್ತು ವೈದ್ಯೆಯಾಗಿರುವ ಪತ್ನಿ ಜಯಶ್ರೀ ದೊಡ್ಡಮನಿ ಅವರ ಬಳಿ 1.50 ಲಕ್ಷ ರೂ. ನಗದು ಇದೆ. ರಾಧಾಕೃಷ್ಣ ಅವರ ಬ್ಯಾಂಕ್ ಖಾತೆಗಳಲ್ಲಿ 1.10 ಕೋಟಿ ರೂ. ಹಣವಿದ್ದರೆ, ಪತ್ನಿ ಖಾತೆಯಲ್ಲಿ 1.18 ಕೋಟಿ ರೂ ಇದೆ. ಇದರ ಜತೆಗೆ 1.31 ಕೋಟಿ ರೂ. ಎಚ್‌ಯುಎಫ್ ಚರ ಆಸ್ತಿ ಇದೆ.

63 ಲಕ್ಷ ಮೌಲ್ಯದ ಚಿನ್ನಾಭರಣ

ರಾಧಾಕೃಷ್ಣ ದೊಡ್ಡಮನಿ ಅವರು 25.18 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಬಳಿ 10.13 ಕೋಟಿ ರೂ. ಮೊತ್ತದ ಸ್ಥಿರ ಆಸ್ತಿ ಇದೆ. ಇನ್ನು 9.54 ಕೋಟಿ ರೂ. ಮೌಲ್ಯದ ಎಚ್‌ಯುಎಫ್ ಬಳುವಳಿ ಸಂಪತ್ತು ಇದೆ. ರಾಧಾಕೃಷ್ಣ ಅವರ ಬಳಿ 1.01 ಲಕ್ಷ ರೂ. ಮೌಲ್ಯದ ಟೊಯೊಟಾ ಇನ್ನೋವಾ ಮತ್ತು 2.85 ಲಕ್ಷ ರೂ. ಮೌಲ್ಯದ ಮಹೀಂದ್ರಾ ಬೊಲೆರೊ ಕಾರುಗಳಿವೆ. ಚಿನ್ನ, ವಜ್ರ ಹಾಗೂ ಬೆಳ್ಳಿ ಸೇರಿದಂತೆ 22.06 ಲಕ್ಷ ರೂ. ಮೊತ್ತದ ಆಭರಣಗಳಿವೆ. ಅವರ ಪತ್ನಿ ಬಳಿ 63.20 ಲಕ್ಷ ರೂ. ಮೌಲ್ಯದ ಆಭರಣಗಳಿವೆ.

ಬೆಂಗಳೂರಿನಲ್ಲಿ ನಾಲ್ಕು ನಿವಾಸ

ರಾಧಾಕೃಷ್ಣ ಅವರು ಬೆಂಗಳೂರಿನಲ್ಲಿ ಒಟ್ಟು 4.23 ಕೋಟಿ ರೂ. ಮೌಲ್ಯದ ಎರಡು ನಿವಾಸಗಳನ್ನು ಹೊಂದಿದ್ದಾರೆ. ಅವರ ಪತ್ನಿ ಡಾ. ಜಯಶ್ರೀ ಕೂಡ ಬೆಂಗಳೂರಿನಲ್ಲಿ 5.47 ಕೋಟಿ ರೂ. ಮೌಲ್ಯದ ಎರಡು ಮನೆಗಳ ಒಡತಿಯಾಗಿದ್ದಾರೆ.

RELATED ARTICLES

Related Articles

TRENDING ARTICLES