Sunday, May 12, 2024

ರಾಜ್ಯದ ಈ ಜಿಲ್ಲೆಗಳಲ್ಲಿ ಏಪ್ರಿಲ್ 14 ರವರೆಗೆ ಮಳೆ

ಬೆಂಗಳೂರು : ರಾಜ್ಯದಲ್ಲಿ ಬಿಸಿಲ ತಾಪ ಏರುತ್ತಿರುವ ನಡುವೆಯೇ ರೈತಾಪಿ ವರ್ಗಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ. ಯುಗಾದಿ ಸಂಭ್ರಮದಲ್ಲಿರುವ ನಾಡಿನ ಜನತೆ ಕೊಂಚ ನಿರಾಳರಾಗಿದ್ದಾರೆ.

ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಏಪ್ರಿಲ್​ 14 ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಕೊಡಗು, ಚಿಕ್ಕಮಗಳೂರು, ಮೈಸೂರಿನಲ್ಲಿ ಮಳೆಯಾಗಲಿದೆ. ನಾಳೆ (ಏಪ್ರಿಲ್ 10) ಹಾವೇರಿ ಗದಗ, ಕಲಬುರಗಿ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಳೆಯಾಗುವ ನಿರೀಕ್ಷೆ ಇದೆ.

ಇನ್ನೂ, ಕೊಡಗು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಚೇರಂಗಾಲ, ಸಣ್ಣಪುಲಿಕೋಟು, ಅಯ್ಯಂಗೇರಿ, ಎಮ್ಮೆಮಾಡು, ನೆಲಜಿ, ಬಲ್ಲಾಮಾವಟಿ, ಕಾರುಗುಂದ ಸೇರಿದಂತೆ ಹಲವೆಡೆ ವರ್ಷದ ಮೊದಲ ಮಳೆ ಸುರಿದೆ. ಇದು ಯುಗಾದಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲು

ಬೆಂಗಳೂರಿನಲ್ಲಿ 37.6 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 15 ವರ್ಷಗಳಲ್ಲಿ ಏಪ್ರಿಲ್ ತಿಂಗಳಲ್ಲಿ ದಾಖಲಾದ 3ನೇ ಗರಿಷ್ಠ ಉಷ್ಣಾಂಶವಾಗಿದೆ. ವಾಡಿಕೆ ಪ್ರಮಾಣಕ್ಕಿಂತ 3.6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಗರಿಷ್ಠ ಉಷ್ಣಾಂಶದಿಂದಾಗಿ ಬೆಂಗಳೂರು ಮಂದಿ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

RELATED ARTICLES

Related Articles

TRENDING ARTICLES