Wednesday, May 1, 2024

ಇಸ್ರೋದ ‘ಪುಷ್ಪಕ್‌’ ವಿಮಾನ ಲ್ಯಾಂಡಿಂಗ್ ಯಶಸ್ವಿ; ಚಳ್ಳಕೆರೆಯಲ್ಲಿ ಪ್ರಯೋಗ

ಚಿತ್ರದುರ್ಗ: ಇಸ್ರೋ ಇಂದು ಚಿತ್ರದುರ್ಗ ಸಮೀಪದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ಎಟಿಆರ್) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ) ‘ಪುಷ್ಪಕ್’ ಅನ್ನು ಉಡಾಯಿಸಿ, ನಂತರ ಯಶಸ್ವಿಯಾಗಿ ಲ್ಯಾಂಡಿಂಗ್​ ಮಾಡುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ.

ಆರ್‌ಎಲ್‌ವಿಯನ್ನು ಬೆಳಿಗ್ಗೆ 7 ಗಂಟೆಗೆ ಚಳ್ಳಕೆರೆ ರನ್ ವೇಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಆರ್‌ಎಲ್‌ವಿಯ ಮೂರನೇ ಲ್ಯಾಂಡಿಂಗ್ ಮಿಷನ್ ಆಗಿದೆ. ಇಸ್ರೋ ಈ ಹಿಂದಿನ ಕಾರ್ಯಾಚರಣೆಗಳನ್ನು 2016 ಹಾಗೂ 2023ರ ಏಪ್ರಿಲ್‌ನಲ್ಲಿ ಯಶಸ್ವಿಯಾಗಿ ನಡೆಸಿತ್ತು.

ಸಂಪೂರ್ಣ ಮರುಬಳಕೆಯ ಉಡಾವಣಾ ವಾಹನ

ಉಡಾವಣಾ ವಾಹನ ‘ಪುಷ್ಪಕ್’ ಅನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯಲಾಯಿತು. ನಂತರ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ನಿಯತಾಂಕಗಳನ್ನು ಸರಿಯಾಗಿಸಿದ ಬಳಿಕ ಉಡಾವಣೆ ಮಾಡಲಾಗಿದೆ. ಈ ಯೋಜನೆಯು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದ ಪ್ರವೇಶವನ್ನು ಸಕ್ರಿಯಗೊಳಿಸಲು ಸಂಪೂರ್ಣ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಕ್ಕಾಗಿ ಪೂರಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳ ಭಾಗ” ಎಂದು ಇಸ್ರೋ ಹೇಳಿದೆ.

ಬಾಹ್ಯಾಕಾಶ ಪ್ರವೇಶವನ್ನು ಅತ್ಯಂತ ಕೈಗೆಟುಕುವಂತೆ ಮಾಡುವಲ್ಲಿ ಇದು ಭಾರತದ ದಿಟ್ಟ ಹೆಜ್ಜೆ. ಕಕ್ಷೆಯಲ್ಲಿನ ಉಪಗ್ರಹಗಳಿಗೆ ಇಂಧನ ತುಂಬುವುದು, ನವೀಕರಣಕ್ಕಾಗಿ ಕಕ್ಷೆಯಿಂದ ಉಪಗ್ರಹಗಳನ್ನು ಹಿಂಪಡೆಯುವುದನ್ನು ಈ ವಾಹನದ ಮೂಲಕ ಮಡಬಹುದು. ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡಲು ಇದು ಅನುಕೂಲಕಾರಿ ಎಂದು ಇಸ್ರೋ ತಿಳಿಸಿದೆ.

 

 

RELATED ARTICLES

Related Articles

TRENDING ARTICLES