Tuesday, May 21, 2024

ಮೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಸ್ಪರ್ಧೆ ಖಚಿತ: ಹೆಚ್​.ಡಿ.ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌ ಅಭ್ಯರ್ಥಿಗಳು ಹಾಸನ, ಮಂಡ್ಯ ಹಾಗೂ ಕೋಲಾರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್‌ ಕೋರ್‌ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಚಿಕಿತ್ಸೆಗಾಗಿ 5 ದಿನ ಚೆನೈಗೆ ಹೋಗ್ತಿದ್ದೇನೆ. 21ರಂದು ಸಮಯ ನಿಗದಿ ಮಾಡಿಕೊಂಡಿದ್ದಾರೆ. ಅದಕ್ಕೋಸ್ಕರ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿಗಳು ಮತ್ತು ಜಿಲ್ಲಾಘಟಕದ ಅಧ್ಯಕ್ಷರು ಮಾಜಿ ಶಾಸಕರ ಸಭೆ ಕರೆದು ಚರ್ಚೆ ಮಾಡಿದ್ದೇನೆ.

ನಮ್ಮ ಉದ್ದೇಶ ಕಾಂಗ್ರೆಸ್​ನ್ನು ಸೋಲಿಸುವುದು

ನಮ್ಮ ಉದ್ದೇಶ ಕಾಂಗ್ರೆಸ್‌ ಅನ್ನು 25 ಕ್ಷೇತ್ರಗಳಲ್ಲಿ ಸೋಲಿಸಬೇಕಿದೆ. ಹೀಗಾಗಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಜೆಡಿಎಸ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಕೋಲಾರ, ಮಂಡ್ಯ ಹಾಗೂ ಹಾಸನದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಶಕ್ತಿ ಬಿಜೆಪಿಗಿಂತ ಹೆಚ್ಚಾಗಿದೆ

ಉತ್ತರ ಕರ್ನಾಟಕ ಭಾಗದಲ್ಲಿ ವಿಜಯಪುರ, ಕಲುಬುರಗಿಯಲ್ಲಿ ನಮ್ಮ ಶಕ್ತಿ ಬಿಜೆಪಿಗಿಂತ ಹೆಚ್ಚಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮನ್ನ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆಯಾಗಬೇಕು. ನಮ್ಮನ್ನ ಕಡೆಗಣಿಸಿದ್ರೆ ಅದರಿಂದಾಗುವ ಪರಿಣಾಮಗಳನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ.

ಬಿಜೆಪಿ ಹೈಕಮಾಂಡ್ ಗೆ ಮುಟ್ಟಿಸಬೇಕಂತ ಎಲ್ಲರು ಚರ್ಚೆ ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ಹೊಂದಾಣಿಕೆ ಜೆಡಿಎಸ್ ಗೆ ಹೆಚ್ಚು ಅನುಕೂಲವಾಗಿಲ್ಲಾ ಅಂತಾ ನಮ್ಮ ಮುಖಂಡರೊಬ್ಬರು ಹೇಳಿದರು. ರಾಜ್ಯದ 18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಶೇ.3 ಮತಗಳು ಸ್ವಿಂಗ್ ಆದರೆ ಬಿಜೆಪಿಗೆ ಅನುಕೂಲವಾಗುತ್ತದೆ. ಇದನ್ನ ಹೈಕಮಾಂಡ್ ಗಮನಕ್ಕೆ ತನ್ನಿ ಅಂತಾ ಹೇಳಿದ್ದಾರೆ. ಇದಕ್ಕೆ ಮುಂದೆ ಪೆಟ್ಟು ಬಿದ್ರೆ ಅಗಲಿರುವ ಸಾಧಕ ಬಾಧಕಕ್ಕೆ ಅವರೇ ಜವಾಬ್ದಾರಿ ಎಂಬುದನ್ನು ಚರ್ಚೆ ಮಾಡಲಾಗಿದೆ ಎಂದರು.

2 ಸೀಟು ತೆಗೆದುಕೊಳ್ಳುವುದಕ್ಕೆ ನಾನು ಇಷ್ಟೆಲ್ಲಾ ಪ್ರಯತ್ನ ಪಡೆಬೇಕಾ, ಹೊಂದಾಣಿಕೆ ಮಾಡಿಕೊಳ್ಳಬೇಕಾ?

ಜೆಡಿಎಸ್‌ಗೆ ಎರಡೇ ಸೀಟು ಸಿಗಲಿದೆಯೇ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಅಧಿಕೃತ ಘೋಷಣೆ ಆಗೋವರೆಗೂ ಮಾತಾಡೊಲ್ಲ. ನಾನು 6-7 ಸೀಟು ಕೇಳಿಲ್ಲ. ನಾವು ಕೇಳಿದ್ದೇ 3 ರಿಂದ 4 ಸೀಟು. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. ಮೂರು ನಾಲ್ಕು ಸೀಟು ಸಿಗುವ ನಂಬಿಕೆ ಇದೆ. 2 ಸೀಟು ತೆಗೆದುಕೊಳ್ಳುವುದಕ್ಕೆ ನಾನು ಇಷ್ಟೆಲ್ಲಾ ಪ್ರಯತ್ನ ಪಡೆಬೇಕಾ, ಹೊಂದಾಣಿಕೆ ಮಾಡಿಕೊಳ್ಳಬೇಕಾ? ಹಾಸನ, ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗಳು ಸ್ವತಂತ್ರವಾಗಿಯೇ ಗೆಲ್ಲುತ್ತಾರೆ. ಇನ್ನು ಕೆಲವೆಡೆ ತ್ರಿಕೋನ ಸ್ವರ್ಧೆ ಆದರೂ ಸುಲಭವಾಗಿ ಗೆಲ್ಲುತ್ತೇವೆ ಎಂದರು. ಆದರೆ, 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಕ್ತಿಯನ್ನ ಧಾರೆಯೆರೆದರೆ, ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದರು.

RELATED ARTICLES

Related Articles

TRENDING ARTICLES