ಕಾರ್ಕಳ : ಜೀವಂತ ಕಪ್ಪೆಯ ಮೈಮೇಲೆ ಅಣಬೆಯೊಂದು ಮೊಳಕೆಯೊಡೆದಿರುವ ವಿಸ್ಮಯಕಾರಿ ವಿದ್ಯಾಮಾನವೊಂದು ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕಿನ ಕುದುರೆಮುಖ ಉದ್ಯಾನವನ ವ್ಯಾಪ್ತಿಯ ಮಾಳ ಗ್ರಾಮದಲ್ಲಿ ಜಗತ್ತಿನ ಪ್ರಪ್ರಥಮ ವಿದ್ಯಮಾನ ದಾಖಲಾಗಿದೆ. ಕರ್ನಾಟಕ ಮತ್ತು ಕೇರಳ ಪಶ್ಚಿಮಘಟ್ಟಗಳಲ್ಲಿ ಸ್ಥಳೀಯವಾಗಿ ಮಾತ್ರ ಕಂಡು ಬರುವ ‘ಗೋಲ್ಡನ್ ಬ್ಯಾಕ್ಡ್ ಫ್ರಾಗ್’ ಜಾತಿಯ ಕಪ್ಪೆಯ ಎಡ ಪಾರ್ಶ್ವದಲ್ಲಿ ಅಣಬೆ ಮೊಳಕೆ ಒಡೆದಿರುವುದು ಕಂಡುಬಂದಿದೆ.
ಮಾಳದ ದಟ್ಟ ಅರಣ್ಯದಲ್ಲಿ ರಾತ್ರಿ ವೇಳೆ ಕಪ್ಪೆ ಮತ್ತು ಹಾವುಗಳನ್ನು ಗಮನಿಸಲು ಹೋದ ತಂಡ, ಕೊಳವೊಂದರಲ್ಲಿ ನಲವತ್ತಕ್ಕೂ ಹೆಚ್ಚು ಗೋಲ್ಡನ್ ಬ್ಯಾಕ್ಡ್ ಕಪ್ಪೆಗಳಿರುವುದನ್ನು ಗಮನಿಸಿತು. ಅದರಲ್ಲಿ ಒಂದು ಕಪ್ಪೆಯ ಪಕ್ಕೆಯಲ್ಲಿ ಈ ಅಪರೂಪದ ವಿದ್ಯಾಮಾನವನ್ನು ಗುರುತಿಸಿದ ಪರಿಸರ ತಜ್ಞ ಲೋಹಿತ್ ವೈ.ಟಿ. ಫೋಟೋವನ್ನು ದಾಖಲಿಸಿದ್ದಾರೆ.
ಪ್ರಾಣಿ ಮತ್ತು ಸಸ್ಯ ವರ್ಗಕ್ಕೆ ಸೇರದ ಅಣಬೆ
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬಾನೆಟ್ ಮಶ್ರೂಮ್ ಬೆಳೆದ ಅಣಬೆಗಳು ತನ್ನ ಸ್ಪೋರ್ಸ್(ಬೀಜಕ)ಗಳನ್ನು ಗಾಳಿಯಲ್ಲಿ ಬಿಟ್ಟು ಬಿಡುತ್ತದೆ. ಅವು ತನಗೆ ಸೂಕ್ತವಾದ ವಾತಾವರಣ ಹಾಗೂ ಜಾಗದಲ್ಲಿ ನೆಲೆಯೂರಿ ಮೊಳಕೆ ಒಡೆಯುತ್ತದೆ. ಪ್ರಾಣಿ ವರ್ಗ ಮತ್ತು ಸಸ್ಯ ವರ್ಗಗಳೆರಡಕ್ಕೂ ಸೇರದ ಅಣಬೆ, ಫಂಗೈ ವರ್ಗಕ್ಕೆ ಸೇರಿದೆ ಎಂದು ತಿಳಿಸಿದ್ದಾರೆ.
ವಿಜ್ಞಾನ ಲೋಕವನ್ನೇ ನಿಬ್ಬೆರಗುಗೊಳಿಸಿದೆ
ಅಣಬೆಗಳು ಕೊಳೆಯುತ್ತಿರುವ ಇತರ ವಸ್ತುಗಳಿಂದ ಮತ್ತು ಮಣ್ಣಿನಲ್ಲಿ ಮಾತ್ರ ಬೆಳೆಯುತ್ತವೆ. ಈ ಅಣಬೆ ಕೊಳೆತ ಮರದ ಮೇಲಷ್ಟೇ ಬೆಳೆಯುತ್ತದೆ. ಆದರೆ, ಇಲ್ಲಿ ಒಂದು ಜೀವಂತ ಜೀವಿಯ ಮೇಲೆ ಅಣಬೆ ಬೆಳೆದಿರುವುದು ಜಗತ್ತಿನಲ್ಲಿಯೇ ಮೊದಲ ದಾಖಲೆಯಾಗಿದೆ. ಈ ಅದ್ಭುತವು ಇಡೀ ವಿಜ್ಞಾನ ಲೋಕವನ್ನೇ ನಿಬ್ಬೆರಗುಗೊಳಿಸಿದೆ ಎಂದು ಪರಿಸರ ತಜ್ಞ ಲೋಹಿತ್ ವೈ.ಟಿ. ಹೇಳಿದ್ದಾರೆ.