Saturday, May 18, 2024

ವೈದ್ಯರು, ನಿರ್ವಹಣೆ ಇಲ್ಲದೇ ‘ನಮ್ಮ ಕ್ಲಿನಿಕ್’ಗಳಿಗೆ ಬೀಗ..!

ಬೆಂಗಳೂರು : ಅದು ಅಂದಿನ ಸರ್ಕಾರದ ಕನಸಿನ ಕೂಸು. ಆದ್ರೆ, ಆ ಕೂಸು ಬಡವಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಮೂಲೆ ಗುಂಪಾಗಿದೆ. ಸಾಮಾನ್ಯ ಜನರ ಆರೋಗ್ಯ ಸುಧಾರಣೆಗೆ ನಿರ್ಮಿಸಲಾದ ಅದೆಷ್ಟೋ ನಮ್ಮ ಕ್ಲಿನಿಕ್​ಗಳು ನಮ್ಮದಾಗದೇ ಉಳಿದಿದ್ದು, ಹೇಳೋರಿಲ್ಲಾ ಎಂಬ ಸ್ಥಿತಿಗೆ ಬಂದು ತಲುಪಿದೆ.

ಸಾಮಾನ್ಯ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಒದಗಿಸಲು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗಿ ಅಂದಿನ ಸರ್ಕಾರದ ಸಹಕಾರದೊಂದಿಗೆ ನಮ್ಮ‌ ಕ್ಲಿನಿಕ್ ಎಂಬ ಯೋಜನೆಯನ್ನು ಜಾರಿಗೆ ತಂದಿತ್ತು. ಆದ್ರೆ, ನಮ್ಮ ಕ್ಲಿನಿಕ್ ಗಳು ಆರಂಭವಾಗಿದ್ರೂ ಕೂಡ ಜನ ಸಾಮನ್ಯರ ಸೇವಗೆ ದೊರೆಯದಂತಾಗಿದೆ.

ಅದೆಷ್ಟೋ ನಮ್ಮ ಕ್ಲಿನಿಕ್‌ಗಳು ಆರಂಭವಾದ ಕೆಲದಿನಗಳಲ್ಲೇ ಬೀಗ ಹಾಕಿಕೊಂಡು ಸುಮ್ಮನಾಗಿದ್ದು, ಹೇಳೋರಿಲ್ಲ. ಕೇಳೋರಿಲ್ಲಾ ಎಂಬಂತಾಗಿದೆ ನಮ್ಮ ಕ್ಲಿನಿಕ್ ಗಳ ಪರಿಸ್ಥಿತಿ. ಸರಿಯಾದ ನಿರ್ವಹಣೆ ಇಲ್ಲದೆ ಸರ್ಕಾರದ ಕನಸಿನ ಕೂಸು ಬಡವಾಗಿದೆ. ಇನ್ನೂ ಅದೆಷ್ಟೋ ಪ್ರಾಥಮಿಕ ಕೇಂದ್ರಗಳನ್ನು ನಮ್ಮ ಕ್ಲಿನಿಕ್ ಗಳಾಗಿ ಆರೋಗ್ಯ ಇಲಾಖೆ ಬದಲಾಯಿಸಿತ್ತು ಆದ್ರೆ ಇದೀಗಾ ಅವುಗಳಲ್ಲೂ ವೈದ್ಯರ ಕೊರತೆ ಶುರುವಾಗಿದ್ದು, ಬೀಗ ಹಾಕಿಕೊಳ್ಳುವ ಪರಿಸ್ಥಿತಿಗೆ ತಲುಪಿದೆ.

ವೈದ್ಯರ ಕೊರತೆಯಿಂದ ಕ್ಲಿನಿಕ್ ಸ್ಥಗಿತ

ಇನ್ನೂ ಆರೋಗ್ಯ ಇಲಾಖೆ ಈಗಾಗಲೇ ಇದರ ಬಗ್ಗೆ ಸ್ಪೆಷಲ್‌ ಡ್ರೈವ್ ಒಂದನ್ನು ಆರಂಭಿಸಿದ್ದು, ಮುಚ್ಚಿ ಹೋಗಿರುವ ನಮ್ಮ ಕ್ಲಿನಿಕ್​ಗಳಿಗೆ ಮರು ಜೀವ ನೀಡಲು ಮುಂದಾಗಿದೆ. ವೈದ್ಯರ ಕೊರತೆಯಿಂದಾಗಿ ಅದೆಷ್ಟೋ ನಮ್ಮ ಕ್ಲಿನಿಕ್​ಗಳ ಕಾರ್ಯ ಸ್ಥಗಿತವಾಗಿದ್ದು ಆದಷ್ಟೂ ಬೇಗ ತಜ್ಞ ವೈದ್ಯರ ನೇಮಕಾತಿ ಮಾಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಅತಿ ಶೀಘ್ರದಲ್ಲಿ ಹದಗೆಟ್ಟಿರುವ ನಮ್ಮ ಕ್ಲಿನಿಕ್ ಗಳಿಗೆ ಮ್ಯಾಜಿಕಲ್ ಟಚ್ ನೀಡಿ ಮತ್ತೆ ಬಡ ಜನರ ಸೇವೆಗೆ ಲಭ್ಯ ವಾಗುವಂತೆ ಮಾಡಲು ಮುಂದಾಗಿದೆ.

ನಮ್ಮ ಕ್ಲಿನಿಕ್​ಗೆ ಮತ್ತೆ ಮರುಜೀವ?

ಒಟ್ನಲ್ಲಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಎರಡು ಪಕ್ಷಗಳ ಸ್ಪರ್ಧೆಯಲ್ಲಿ ಬಂಗಾರದಂತಹ ಯೋಜನೆಯೊಂದು ತುಕ್ಕು ಹಿಡಿಯುತ್ತಿದೆ. ಆದ್ರೆ, ಸರ್ಕಾರ ನಮ್ಮ ಕ್ಲಿನಿಕ್​ಗೆ ಮತ್ತೆ ಮರುಜೀವ ನೀಡಲು ಮುಂದಾಗಿರೋ ವಿಷಯ ಬರಿ ಬಾಯಿ ಮಾತಾಗಿ ಉಳಿಯುತ್ತಾ? ಇಲ್ಲಾ ಕಾರ್ಯ ರೂಪಕ್ಕೆ ಬರುತ್ತಾ? ಎನ್ನುವುದನ್ನು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES