ಬೆಂಗಳೂರು : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಪಿಡಿಒಗೆ ಅಮಾನತು ಶಿಕ್ಷೆ ನೀಡಿದೆ.
ಸರ್ಕಾರದ ಅನುಮತಿ ಪಡೆಯದೇ ಧರ್ಮ ಧ್ವಜ ಹಾರಿಸಲು ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ನೀಡಿದ್ದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಶೇಕ್ ತನ್ವೀರ್ ಆಸಿಫ್ ಅವರು ಕೆರೆಗೋಡು ಗ್ರಾಮ ಪಂಚಾಯಿತಿ ಪಿಡಿಒ ಜೀವನ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಪಿಡಿಒ ಅಮಾನತು ಮಾಡಿರುವುದಕ್ಕೆ ಸಿಇಒ ಐದು ಕಾರಣಗಳನ್ನು ನೀಡಿದ್ದಾರೆ. ರಾಷ್ಟ್ರಧ್ವಜದ ಬದಲು ಹನುಮ ಧ್ವಜ ಹಾರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೆ, ವಿಪಕ್ಷಗಳು ಸರ್ಕಾರ ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸುತ್ತಿವೆ.
ಪಿಡಿಒ ಅಮಾನತಿಗೆ 5 ಕಾರಣ
- ಗ್ರಾಮ ಪಂಚಾಯಿತಿ ಸ್ವತ್ತನ್ನು ಖಾಸಗಿಯವರಿಗೆ ನೀಡುವುದಕ್ಕೆ ಸರ್ಕಾರದ (ಜಿಲ್ಲೆ ಅಥವಾ ತಾಲೂಕು ಪಂಚಾಯಿತಿ) ಅನುಮತಿ ಕಡ್ಡಾಯ.
- ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಖಾಸಗಿಯವರಿಗೆ ಟ್ರಸ್ಟ್‌ಗೆ ಧ್ವಜ ನಿರ್ಮಾಣಕ್ಕೆ ನೀಡಿರುವುದು.
- ಕೆರಗೋಡು ಗ್ರಾಮದಲ್ಲಿ ಧ್ವಜ ತೆರವು ಮಾಡಲು ಬಂದ ಅಧಿಕಾರಿಗಳ ವಿರುದ್ಧ ಉಂಟಾದ ಪ್ರತಿಭಟನೆ, ಸಂಘರ್ಷಕ್ಕೆ ಪಿಡಿಓ ನೇರ ಕಾರಣ.
- ಖಾಸಗಿಯವರಿಗೆ ಅಧಿಕಾರ ವ್ಯಾಪ್ತಿ ಮೀರಿ ಧ್ವಜ ಸ್ತಂಭ ನಿರ್ಮಾಣಕ್ಕೆ ಅನುಮತಿ ನೀಡಿದ ನಂತರವೂ, ರಾಷ್ಟ್ರ ಧ್ವಜ ಬಿಟ್ಟು ಹನುಮ ಧ್ವಜ ನಿರ್ಮಿಸಿದ ನಂತರ ತೆರವುಗೊಳಿಸದೇ ಕರ್ತವ್ಯ ಲೋಪ ಎಸಗಿದ್ದೀರಿ.
- ಕೆರಗೋಡು ಗ್ರಾಮದ ಸರ್ಕಾರಿ ಸ್ವತ್ತಿನಲ್ಲಿ ಧ್ವಜ ಸ್ತಂಭದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲು ಅನುಮತಿ ನೀಡಿದಾಗ ಷರತ್ತು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳದೆ ನಿರ್ಲಕ್ಷ ಮಾಡಲಾಗಿದೆ.