Wednesday, January 22, 2025

ಅರುಣ್ ಯೋಗಿರಾಜ್ ಕೈಚಳಕದಲ್ಲಿ ಅರಳಿದ ವಿಷ್ಣುವರ್ಧನ್ ಪ್ರತಿಮೆ

ಮೈಸೂರು: ಕನ್ನಡಿಗ ಅರುಣ್ ಯೋಗಿರಾಜ್ ಅರುಣ್ ಕೈಚಳಕದಲ್ಲಿ ‘ವಿಷ್ಣು ದಾದ’ ಅವರ ಆಕರ್ಷಕ ಪ್ರತಿಮೆ ಇಂದು ಲೋಕಾರ್ಪಣೆಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ನಗರದಲ್ಲಿ ವಿಷ್ಣು ಸ್ಮಾರಕ ಲೋಕಾರ್ಪಣೆ ಮಾಡಿದ್ದಾರೆ.

‘ಸಾಹಸ ಸಿಂಹ’ ಕೊನೆಯುಸಿರೆಳೆದು 12 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣಗೊಂಡಿದ್ದು, ಕೊನೆಗೂ ಉದ್ಘಾಟನೆ ಭಾಗ್ಯ ಕಾಣುತ್ತಿದೆ. ‘ವಿಷ್ಣು ದಾದ’ ಅವರ ಅಭಿಮಾನಿ ಅರುಣ್ ಯೋಗಿರಾಜ್ ಈ ಆಕರ್ಷಕ ಪ್ರತಿಮೆಯ ಶಿಲ್ಪಿ.

4 ಜನರ ತಂಡದ ಶ್ರಮ: ಅರುಣ್ ಯೋಗಿರಾಜ್ ನೇತೃತ್ವದಲ್ಲಿ ನಾಲ್ವರ ತಂಡದಿಂದ 10 ದಿನಗಳಲ್ಲಿ ಪ್ರತಿಮೆ ತಯಾರು ಮಾಡಲಾಗಿದೆ. ಇದಕ್ಕೆ 11 ಲಕ್ಷ ರೂ ಖರ್ಚು ಮಾಡಲಾಗಿದೆ. ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕೆ 7 ಟನ್ ಕೃಷ್ಣಶಿಲೆ ಬಳಸಿದ್ದಾರೆ. ಕೆತ್ತನೆಯ ಬಳಿಕ ಒಂದು ಮುಕ್ಕಾಲು ಟನ್ ತೂಕವಿರುವ ವಿಷ್ಣುವರ್ಧನ್ ಪ್ರತಿಮೆ ಅತ್ಯಂತ ಸುಂದರವಾಗಿ ರೂಪುಗೊಂಡಿದೆ.

ಕೃಷ್ಣಶಿಲೆಯ ವಿಶೇಷತೆ: “ಈ ಪ್ರತಿಮೆ ಬೆಂಕಿ, ಆ್ಯಸಿಡ್, ಗಾಳಿ, ಬಿಸಿಲು, ನೀರು ತಡೆದುಕೊಳ್ಳುವ ಶಕ್ತಿ ಹೊಂದಿದೆ. ಸತತ ಹತ್ತು ದಿನಗಳ ಸಮಯದಲ್ಲಿ ವಿಷ್ಣು ದಾದ ಮೂರ್ತಿ ತಯಾರು ಮಾಡಿದ್ದೇವೆ. ಇಂದು ಹಾಲಾಳು ಗ್ರಾಮದಲ್ಲಿ ಸ್ಮಾರಕ ಲೋಕಾರ್ಪಣೆ ಆಗುತ್ತಿದೆ. ಕನ್ನಡ ಜನತೆಗಿದು ಬಹಳ ಸಂತಸದ ವಿಚಾರ. ನಾನು ಡಾ.ವಿಷ್ಣುವರ್ಧನ್ ಅವರ ಅಭಿಮಾನಿ. ಬಹಳ ಖುಷಿ ಆಗಿದೆ” ಎನ್ನುತ್ತಾರೆ ಶಿಲ್ಪಿ ಅರುಣ್ ಯೋಗಿರಾಜ್.

ವಿಷ್ಣು ಸಿನಿಮಾ ಸಾಧನೆ: 70ರ ದಶಕದಲ್ಲಿ ನಾಗರಹಾವು ಚಿತ್ರದ ಅದ್ಭುತ ಯಶಸ್ಸಿನ ಮೂಲಕ ರಾಷ್ಟ್ರಮಟ್ಟದಲ್ಲಿ ಬಹು ದೊಡ್ಡ ಸಂಚಲನ ಸೃಷ್ಟಿ ಮಾಡಿದ ಹೆಗ್ಗಳಿಕೆಗೆ ಪಾತ್ರರಾದವರು ಡಾ. ವಿಷ್ಣುವರ್ಧನ್. ಸುಮಾರು ನಾಲ್ಕು ದಶಕಗಳ ಕಾಲ ನಿರಂತರವಾಗಿ 200ಕ್ಕೂ ಹೆಚ್ಚು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಪ್ರಸಿದ್ಧಿ ಪಡೆದುಕೊಂಡಿದ್ದರು.

ಸರ್ಕಾರವು ಸ್ಮಾರಕ ನಿರ್ಮಾಣಕ್ಕಾಗಿ ಹೆಚ್.ಡಿ.ಕೋಟೆ ರಸ್ತೆ, ಉದ್ದೂರು ಕ್ರಾಸ್, ಹಾಲಾಳು ಗ್ರಾಮ, ಮೈಸೂರು ತಾಲೂಕು, ಮೈಸೂರು ಜಿಲ್ಲೆಯಲ್ಲಿ 5 ಎಕರೆ ಜಾಗ ನಿಗದಿಪಡಿಸಿ 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಿದೆ. ಡಾ.ವಿಷ್ಣುವರ್ಧನ್ ಪ್ರತಿಷ್ಠಾನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಮೂಲಕ ಸ್ಮಾರಕ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಿದ್ದಾರೆ.

ವಿಷ್ಣು ಸ್ಮಾರಕ ಭವನವು ಅವರು ನಟಿಸಿರುವ ಚಲನಚಿತ್ರ ಹಾಗೂ ಅವರ ಜೀವನ ಚರಿತ್ರೆಯ ಸುಮಾರು 676 ಛಾಯಾಚಿತ್ರಗಳನ್ನು ಒಳಗೊಂಡ ಒಂದು ಬೃಹತ್ ಫೋಟೋ ಗ್ಯಾಲರಿ, ಸೆಲ್ಫಿ ಸ್ಟ್ಯಾಚು, ವಾಟರ್ ಬಾಡಿ, ವಿಷ್ಣುವರ್ಧನ್ ಅವರ ಪ್ರತಿಮೆ, 250 ಆಸನಗಳುಳ್ಳ ಥಿಯೇಟರ್‌, ಕಚೇರಿಗಳು ಮತ್ತು ಕ್ಯಾಂಟೀನ್, ಶೌಚಾಲಯಗಳನ್ನೊಳಗೊಂಡ ಹೊರಾಂಗಣ ಉದ್ಯಾನವನ ಒಳಗೊಂಡಿದೆ.

 

RELATED ARTICLES

Related Articles

TRENDING ARTICLES