Monday, May 13, 2024

ಕೇಂದ್ರದಿಂದ ರಾಜ್ಯದ ರೈತರಿಗೆ ಏನು ನೆರವು ಸಿಕ್ಕಿದೆ? ಸಚಿವ ಗುಂಡೂರಾವ್‌ ಪ್ರಶ್ನೆ

ಬೆಂಗಳೂರು: ವಿಪಕ್ಷ ನಾಯಕ ಅಶೋಕ್ ಅವರು “‘ರಾಜ್ಯ ಸರ್ಕಾರ ಜನರಿಗೆ ಗುಳೆ ಗ್ಯಾರಂಟಿ ಕೊಟ್ಟಿದೆ’ ಎಂದು ಹೇಳಿರುವುದಕ್ಕೆ ನಾಚಿಕೆಪಡಬೇಕು ಎಂದು ತಿರುಗೇಟು ನೀಡಿದ್ದಾರೆ.

ಇಂತಹ ಭೀಕರ ಬರದ ನಡುವೆಯೂ ರಾಜ್ಯದ ಜನ ಮೂರೊತ್ತಿನ ಊಟ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮ ಸರ್ಕಾರದ ಯೋಜನೆಗಳೇ ಕಾರಣ ಹೊರತು, ಇವರು ಕುರುಡಾಗಿ ಆರಾಧಿಸುವ ಮೋದಿಯವರಲ್ಲ” ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್‌ ತಾಣದಲ್ಲಿ ಪ್ರತಿಕ್ರಿಯಿಸಿ, “ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಬರದಿಂದ ತತ್ತರಿಸುವ ರೈತರಿಗೆ 2 ಸಾವಿರ ಪರಿಹಾರ ನೀಡುವ ಕೆಲಸ ಮಾಡುತ್ತಿದೆ. ರೈತರ ನೆರವಿಗಾಗಿ ಕೃಷಿ ಭಾಗ್ಯ ಜಾರಿಗೆ ತಂದಿದೆ. ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಏನು ನೆರವು ಸಿಕ್ಕಿದೆ ಎಂದು ಹೇಳುವ ಧಮ್ ಅಶೋಕ್‌ ಅವರಿಗಿದೆಯೇ” ಎಂದು ಪ್ರಶ್ನಿಸಿದ್ದಾರೆ.

“ಅಶೋಕ್‌ರವರೆ, ನಾವು ಕೇಂದ್ರದ ಬಳಿ ಬಿಟ್ಟಿ ಕೊಡಿ ಎಂದು ಅಂಗಲಾಚುತ್ತಿಲ್ಲ. ನಮಗೆ ಬರಬೇಕಾದ ತೆರಿಗೆ ಅನುದಾನದ ಪಾಲು, ಬರ ಪರಿಹಾರದ ಪಾಲನ್ನು ಅಧಿಕಾರಯುತವಾಗಿ ಕೇಳುತ್ತಿದ್ದೇವೆ. ಅದು ನಮ್ಮ ನ್ಯಾಯಯುತವಾದ ಬೇಡಿಕೆ ಕೂಡ ಹೌದು. ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಕಳೆದ‌ ಒಂದು ವಾರದಿಂದ ಅನೇಕ ದಿನಪತ್ರಿಕೆಗಳಲ್ಲಿ ಸರಣಿ ವರದಿ ಪ್ರಕಟವಾಗಿದೆ. ಒಂದು ವೇಳೆ ಆ ವರದಿಗಳನ್ನು ನೀವು ಓದಿಲ್ಲವಾದರೆ, ಸಮಯಾವಕಾಶ ಮಾಡಿಕೊಂಡು ಓದಿ. ಆಗ ‘ಗುಳೆ ಭಾಗ್ಯ’ದ ಕೊಡುಗೆ ಯಾರದ್ದೆಂದು ತಿಳಿಯಲಿದೆ” ಎಂದು ಕುಟುಕಿದ್ದಾರೆ.

ರೈತರ ಬಗ್ಗೆ ಈಗ ಮೊಸಳೆ ಕಣ್ಣೀರು ಸುರಿಸುತ್ತಾ ಸಿದ್ದರಾಮಯ್ಯರ ಮಾನವೀಯತೆಯನ್ನು ಪ್ರಶ್ನಿಸುವ ಅಶೋಕ್‌ರವರಿಗೆ ಇದೇ ಪ್ರಶ್ನೆಯನ್ನು ಮೋದಿಯವರಿಗೆ ಕೇಳಲು ಸಾಧ್ಯವಿದೆಯೇ? ವಾರ್ಷಿಕವಾಗಿ ರೈತರಿಗೆ 6 ಸಾವಿರ ಕೊಡುವುದನ್ನೇ ದೊಡ್ಡ ಸಾಧನೆ ಎಂದು TVಗಳಲ್ಲಿ 24 ಗಂಟೆ ಜಾಹೀರಾತು ಕೊಡುವ ಮೋದಿಯವರು, ಅದೇ ಜಾಹೀರಾತಿಗೆ ಕೊಟ್ಟ ಹಣವನ್ನು ಬರ ಪರಿಹಾರದ ರೂಪದಲ್ಲಿ ಕೊಟ್ಟಿದ್ದರೆ, ರಾಜ್ಯದ ರೈತರು ಇಷ್ಟು ಕಷ್ಟ ಎದುರಿಸಬೇಕಾದ‌ ಪ್ರಮೇಯವೇ ಇರುತ್ತಿರಲಿಲ್ಲ” ಎಂದಿದ್ದಾರೆ.

 

RELATED ARTICLES

Related Articles

TRENDING ARTICLES