Monday, May 20, 2024

ಕಾಂಗ್ರೆಸ್ ಸರ್ಕಾರ ರಾಮ ಭಕ್ತರಿಗೆ ಅವಮಾನ ಮಾಡಿದೆ : ಶಾಸಕ ಯತ್ನಾಳ್

ವಿಜಯಪುರ : ಹುಬ್ಬಳ್ಳಿಯಲ್ಲಿ ರಾಮಮಂದಿರ ಹೋರಾಟದಲ್ಲಿ ಭಾಗಿಯಾದವರನ್ನ ಪೊಲೀಸರು ಬಂಧಿಸಿರುವ ವಿಚಾರ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್​ ಸರ್ಕಾರ ತಾನು ಹಿಂದೂ ವಿರೋಧಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಿಡಿಕಾರಿದ್ದಾರೆ.

1992 ರಲ್ಲಿ ಕರಸೇವಕರಾಗಿ ಶ್ರೀ ರಾಮ ದೇವರ ಸೇವೆ ಮಾಡಿದ ಭಕ್ತರಿಗೆ, ಕಾರ್ಯಕರ್ತರಿಗೆ ಈಗ ನೋಟಿಸ್ ನೀಡಿ ಹುಬ್ಬಳ್ಳಿ ಪೊಲೀಸರು ಬಂಧನ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಸೇಡಿನ ರಾಜಕಾರಣ ತೋರಿಸುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರನ್ನು ವಿಐಪಿ ಪ್ರಕರಣಗಳ ಹುಡುಕಾಟಕ್ಕೆ ನಿಯೋಜಿಸಿರುವ ಗೃಹ ಇಲಾಖೆಯ ಕ್ರಮ ಖಂಡನೀಯ ಎಂದು ಛೇಡಿಸಿದ್ದಾರೆ.

3 ದಶಕಗಳ ಕಾಲ ಯಾಕೆ ಸುಮ್ಮನೆ ಇದ್ರಿ?

ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿ ನೋಡುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ 31 ವರ್ಷಗಳ ಹಳೆಯ ಪ್ರಕರಣಕ್ಕೆ ಜೀವ ನೀಡುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರವಲ್ಲವೇ? ಅಸಲಿಗೆ ಮೂರು ದಶಕಗಳ ಕಾಲ ಸುಮ್ಮನಿದ್ದು, ಈಗ ರಾಮ ಜನ್ಮಭೂಮಿ ಪ್ರಾಣ ಪ್ರತಿಷ್ಠಾಪನೆಯ ದಿನಾಂಕ ನಿಗದಿಯಾದ ಮೇಲೆ ಈ ಕ್ರಮ ಕೈಗೊಂಡಿರುವುದು. ಹಾಗೂ ವಿಶೇಷ ತಂಡ ರಚಿಸಿ ಬಂಧಿಸಲು ಹೊರಟಿರುವುದು ಹೇಯ ಹಾಗೂ ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಮ ಭಕ್ತರಿಗೆ ಮಾಡುವ ಅವಮಾನ

ಆದ್ಯತಾ ಪಟ್ಟಿಯನ್ನಿಟ್ಟುಕೊಂಡು ಕೆಲಸ ಮಾಡಬೇಕಾದ ಪೊಲೀಸರು, ನಿರ್ಜೀವ ಪ್ರಕರಣಕ್ಕೆ ವಿಶೇಷ ತಂಡ ರಚಿಸಿರುವುದು ಹಾಸ್ಯಾಸ್ಪದ. ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಮಟ್ಟ ಹಾಕಬೇಕಾದ ಪೊಲೀಸರು ರಾಮ ಭಕ್ತರ ಮೇಲೆ ತಮ್ಮ ಲಾಠಿ ಪ್ರಹಾರ ಮಾಡುವುದು ರಾಮ ಭಕ್ತರಿಗೆ ಮಾಡುವ ಅವಮಾನ ಎಂದು ಶಾಸಕ ಯತ್ನಾಳ್ ಬೇಸರ ವ್ಯಕ್ತಪಡಿಸಿದೆ.

RELATED ARTICLES

Related Articles

TRENDING ARTICLES