Sunday, November 3, 2024

ಜ್ಞಾನವಾಪಿ ಪ್ರಕರಣ: ಮಸೀದಿ ಸಮಿತಿಯ ಐದು ದಾವೆಗಳು ವಜಾ

ಉತ್ತರ ಪ್ರದೇಶ: ಕಾಶಿ ವಿಶ್ವನಾಥ್ ಹಾಗೂ ಜ್ಞಾನವಾಪಿ ಭೂ ಹಕ್ಕು ವಿವಾದ ಪ್ರಕರಣಗಳ ತೀರ್ಪನ್ನು ಇಂದು ಅಲಹಾಬಾದ್ ಹೈಕೋರ್ಟ್ ಪ್ರಕಟಿಸಿದೆ.

ವಿವಾದಿತ ಸ್ಥಳದಲ್ಲಿ ಪೂಜಿಸುವ ಹಕ್ಕನ್ನು ಕೋರಿ ಹಿಂದೂ ಸಮುದಾಯ ಸಲ್ಲಿಸಿದ ಅರ್ಜಿಯನ್ನು ಹಾಗೂ ಬಾಕಿ ಉಳಿದಿರುವ ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಮತ್ತು ಯುಪಿ ಸುನ್ನಿ ಸೆಂಟ್ರಲ್ ವಕ್ಸ್ ಬೋರ್ಡ್ ಸಲ್ಲಿಸಿದ ಐದು ಅರ್ಜಿಗಳನ್ನು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ.

ಇಂದಿನ ತೀರ್ಪಿನಲ್ಲಿ, 1991ರ ವಿವಾದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಅನುಮೋದಿಸಿದೆ. ಸಿವಿಲ್ ಮೊಕದ್ದಮೆಯು ವಾರಣಾಸಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ.

ಏನಿದು ಪ್ರಕರಣ?

ಜುಲೈ 21ರ 2023ರಂದು ವಾರಣಾಸಿ ಕೋರ್ಟ್, ಮಸೀದಿಯಲ್ಲಿ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿ, ಆದೇಶಿಸಿತ್ತು. ಅದರಂತೆ ಮಸೀದಿಯಲ್ಲಿ ಐಎಸ್‌ಐ ಜುಲೈ 24ರ 2023ರಂದು ಸಮೀಕ್ಷೆ ಆರಂಭಿಸಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್ ಸಮೀಕ್ಷೆಗೆ ತಡೆಯಾಜ್ಞೆ ನೀಡಿತ್ತು. ಮಸೀದಿ ಪರ ಅರ್ಜಿದಾರರು ಅಲಹಾಬಾದ್ ಉಚ್ಚನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು. ಅದರಂತೆ ಅಂಜುಮನ್ ಇಂತೇಜಾಮಿಯಾ ಮಸೀದಿ ಸಲ್ಲಿಸಿದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಅಲಹಾಬಾದ್ ಹೈಕೋರ್ಟ್, ಸಮೀಕ್ಷೆಗೆ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿತ್ತು.

ಬಳಿಕ, ಅಲಹಾಬಾದ್‌ ಹೈಕೋರ್ಟ್ ಸಮೀಕ್ಷೆ ನಡೆಸಲು ಅನುಮತಿಸಿತ್ತು. ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ, ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಅಂತಿಮವಾಗಿ, ಸುಪ್ರೀಂ ಕೋರ್ಟ್ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿತ್ತು.

ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿ ಹಿಂದೂ ಆರಾಧಕರು 2021ರಲ್ಲಿ ವಾರಣಾಸಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯವು ಮಸೀದಿಯಲ್ಲಿ ವಿಡಿಯೋ ಸಮೀಕ್ಷೆಗೆ ಅನುವು ಮಾಡಿಕೊಟ್ಟಿತ್ತು. ಈಗಾಗಲೇ, ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆ ಕೂಡ ಮುಗಿದಿದೆ.

ಶಿವಲಿಂಗ ಪತ್ತೆಯಾದ ಕಾರಣ ವೈಜ್ಞಾನಿಕ ಸಮೀಕ್ಷೆಗೆ ಮನವಿಯನ್ನು ಮಾಡಲಾಗಿತ್ತು. ವಾರಣಾಸಿ ನ್ಯಾಯಾಲಯದ ಮುಂದೆ ಸಲ್ಲಿಸಿದ ಮೊಕದ್ದಮೆಯಲ್ಲಿ, ಹಿಂದೂ ಅರ್ಜಿದಾರರು ಪ್ರಸ್ತುತ ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಪುನಃಸ್ಥಾಪಿಸಲು ಕೋರಿದ್ದರು.

ಡಿ.21ಕ್ಕೆ ವಿಚಾರಣೆ

“ನಾವು ವಾರಣಾಸಿಯ ನ್ಯಾಯಾಲಯಕ್ಕೆ ಮುಚ್ಚಿದ ಕವರ್‌ನಲ್ಲಿ ವರದಿಯನ್ನು ಸಲ್ಲಿಸಿದ್ದೇವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವೈಜ್ಞಾನಿಕ ಸಮೀಕ್ಷೆ ವರದಿಯನ್ನು ಪರಿಶೀಲಿಸಲು ನ್ಯಾಯಾಲಯವು ಡಿಸೆಂಬರ್ 21 ಎಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ” ಎಂದು ಎಎಸ್‌ಐ ಪರ ವಕೀಲ ಅಮಿತ್ ಶ್ರೀವಾಸ್ತವ್ ತಿಳಿಸಿದರು.

RELATED ARTICLES

Related Articles

TRENDING ARTICLES