ಬೆಳಗಾವಿ : ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಈಗಿನ ಶಾಸಕ ವಿಠ್ಠಲ ಹಲಗೇಕರ ಒಡೆತನದ ಲೈಲಾ ಸಕ್ಕರೆ ಕಾರ್ಖಾನೆ ವಿರುದ್ಧ ನೂರಾರು ಕೋಟಿ ಅವ್ಯವಹಾರದ ಆರೋಪ ಮಾಡಿದ್ದಾರೆ.
ಮೊನ್ನೆಯಷ್ಟೇ ಲೈಲಾ ಶುಗರ್ ಸಕ್ಕರೆ ಕಾರ್ಖಾನೆ ವಿರುದ್ಧ ನಿವೃತ್ತ ನ್ಯಾಯಾಧೀಶರ ಪರಿಶೀಲನೆ ನಡೆಸಿದ್ದರು. ಈ ಬೆನ್ನಲ್ಲೇ ಇಂದು ಮಾಧ್ಯಮಗೋಷ್ಠಿ ನಡೆಸಿದ ಅಂಜಲಿ ನಿಂಬಾಳ್ಕರ್, ಲೈಲಾ ಶುಗರ್ಸ ಹಾಗೂ ಶಾಸಕ ವಿಠ್ಠಲ ಹಲಗೇಕರ ವಿರುದ್ಧ ಅನೇಕ ಆರೋಪಗಳ ಸುರಿಮಳೆಗೈದರು.
ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರದ ತನಿಖೆ ನಡೆದಿದೆ. ಅದಕ್ಕೆ ನಾನೇ ದೂರುದಾರಳಾಗಿದ್ದು, ಕಾರ್ಖಾನೆಯಲ್ಲಿ ಭಾರೀ ಅವ್ಯವಹಾರವಾಗಿದ್ದು, ಹಣದ ದುರುಪಯೋಗವಾಗಿದೆ. 2009-2010ರಲ್ಲಿ ಖಾಸಗಿ ಲೈಲಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆಗೆ ಕೊಟ್ಟಿದ್ದರು. ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಅನೇಕ ಷರತ್ತುಗಳಿದ್ದವು. ಆದರೆ, ಇಲ್ಲಿಯವರೆಗೆ ಲೈಲಾ ಸಕ್ಕರೆ ಕಾರ್ಖಾನೆಯವರು ಷರತ್ತು ಈಡೇರಿಸಿಲ್ಲ. ಲೈಲಾ ಸಕ್ಕರೆ ಕಾರ್ಖಾನೆಗೆ ಯಾರೊಬ್ಬರೂ ಪ್ರಶ್ನೆ ಕೇಳಲಿಲ್ಲ ಎಂದು ಹೇಳಿದ್ದಾರೆ.
2018ರಲ್ಲಿ ಲೈಲಾ ಬದಲಾಗಿ ಮಹಾಲಕ್ಷ್ಮಿ ಶುಗರ್ ಅಂಡ್ ಅಗ್ರೋಗೆ ಗುತ್ತಿಗೆ ಇತ್ತು. ಲೈಲಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಕೊಡಲು ಏನು ಅಧಿಕಾರ ಇದೆ. ಲೈಲಾ ಕಾರ್ಖಾನೆ ಕಡೆಯಿಂದ ಮಹಾಲಕ್ಷ್ಮಿಗೆ ಎಲ್ಲಾ ಶೇರ್ ವರ್ಗಾವಣೆ ಆಗಿದೆ. ರೈತರ ಬಾಕಿ ಕೊಡುವ ಜವಾಬ್ದಾರಿ ಲೈಲಾ, ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯವರು ಕೊಡಬೇಕು ಎನ್ನುತ್ತಾರೆ. ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆದಿದೆ ಎಂದು ಅನೇಕ ಆರೋಪಗಳನ್ನು ಮಾಡಿದ್ದಾರೆ.