ಬೆಂಗಳೂರು : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ 14 ವರ್ಷ ಉರುಳಿದೆ. ಆದರೆ, ಈವರೆಗೆ ಅವರ ಅಂತಿಮ ಸಂಸ್ಕಾರ ನಡೆದ ಪುಣ್ಯಭೂಮಿ ಜಾಗದ ವಿವಾದ ಮಾತ್ರ ಬಗೆಹರೆದಿಲ್ಲ. ಅದಕ್ಕೊಂದು ತಾತ್ವಿಕ ಅಂತ್ಯ ಕೊಡಬೇಕು ಅಂತಲೇ ಅಭಿಮಾನಿಗಳು ‘ವಿಷ್ಣು ಪುಣ್ಯಭೂಮಿ ಹೋರಾಟ’ಕ್ಕೆ ಮುಂದಾಗಿದ್ದಾರೆ.
ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ ಇದೇ ಡಿಸೆಂಬರ್ 30ಕ್ಕೆ 14 ವರ್ಷಗಳು ತುಂಬುತ್ತೆ. ದುರಂತ ಅಂದ್ರೆ ಇಷ್ಟು ವರ್ಷಗಳ ಬಳಿಕವೂ ಅವರ ಪುಣ್ಯಭೂಮಿ ಉಳಿಸೋದಕ್ಕಾಗಿ ಅಭಿಮಾನಿಗಳು ಹೋರಾಟ ಮಾಡುವ ಸನ್ನಿವೇಶ ನಿರ್ಮಾಣ ಆಗಿದೆ. ಇದೇ ಡಿಸೆಂಬರ್ 17ರಂದು (ನಾಳೆ) ಫ್ರೀಡಂ ಪಾರ್ಕ್ನಲ್ಲಿ ವಿಷ್ಣು ಅಭಿಮಾನಿಗಳು ಪುಣ್ಯಭೂಮಿ ಹೋರಾಟ ನಡೆಸುವುದಕ್ಕೆ ಸಜ್ಜಾಗಿದ್ದಾರೆ.
2010 ಡಿಸೆಂಬರ್ 30ರಂದು ಡಾ.ವಿಷ್ಣು ಅಗಲಿಕೆಯ ಸುದ್ದಿ ಬಂದಾಗ ಇಡೀ ನಾಡೇ ಆಘಾತಕ್ಕೆ ಒಳಗಾಗಿತ್ತು. ಅಂದು ತರಾತುರಿಯಲ್ಲಿ ಅಂದಿನ ಸರ್ಕಾರ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತಿಮ ಸಂಸ್ಕಾರವನ್ನ ಮಾಡಿಬಿಟ್ಟಿತು. ಆದ್ರೆ, ನಂತರ ದಿನಗಳಲ್ಲಿ ಈ ಜಾಗದ ಸುತ್ತಲಿನ ವಿವಾದಗಳು ಹೊರಬಂದಿದ್ದು.
ತುಂಡು ಭೂಮಿಯನ್ನ ಪುಣ್ಯಸ್ಥಳಕ್ಕೆ ಮೀಸಲಿಡಿ
ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ಸೇರಿದ ಈ ಜಾಗದ ಒಡೆತನದ ಬಗ್ಗೆ ಅವರ ಕುಟುಂಬದಲ್ಲೇ ವಿವಾದಗಳಿವೆ. ಕೋರ್ಟ್ನಲ್ಲಿ ಅನೇಕ ಪ್ರಕರಣಗಳು ನಡೀತಾ ಇವೆ. ಈ ಸಮಸ್ಯೆಗಳಿಂದ ವರ್ಷಗಳೇ ಕಳೆದ್ರೂ ಈ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಿಸೋದಕ್ಕೆ ಸಾಧ್ಯ ಆಗಲೇ ಇಲ್ಲ. ಇದರಿಂದ ಬೇಸತ್ತು ಡಾ. ವಿಷ್ಣು ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿ ಈ ವಿವಾದದಿಂದ ದೂರವೇ ಉಳಿದುಕೊಂಡಿದ್ದಾರೆ. ಆದ್ರೆ, ಅಭಿಮಾನಿಗಳಿಗೆ ಮಾತ್ರ ಸ್ಮಾರಕ ಮೈಸೂರಿನಲ್ಲಿದ್ರೂ, ಅಂತಿಮ ಸಂಸ್ಕಾರ ನಡೆದ ಜಾಗದಲ್ಲೇ ದಾದಾ ಇದ್ದಾರೆ ಅನ್ನೋ ಭಾವನೆ ಮನದಲ್ಲಿ ಉಳಿದುಬಿಟ್ಟಿದೆ. ಅದಕ್ಕಾಗಿ ಅಭಿಮಾನ್ ಸ್ಟುಡಿಯೋದಲ್ಲಿರುವ ಈ ತುಂಡು ಭೂಮಿಯನ್ನ ವಿಷ್ಣು ಪುಣ್ಯಸ್ಥಳಕ್ಕೆ ಮೀಸಲಿಡಿ ಅಂತ ಆಗ್ರಹಿಸ್ತಾ ಬಂದಿದ್ದಾರೆ.
ವಿವಾದಕ್ಕೆ ತಾತ್ವಿಕ ಅಂತ್ಯ ನೀಡಬೇಕು
ಇತ್ತೀಚಿಗೆ ಈ ಜಾಗದಲ್ಲಿ ಪೂಜೆ ಸಲ್ಲಿಸೋದಕ್ಕೆ ಅವಕಾಶ ನೀಡ್ತಾ ಇಲ್ಲ, ಅಭಿಮಾನಿಗಳನ್ನ ಪುಣ್ಯಸ್ಥಳ ನೋಡೋದಕ್ಕೆ ಬಿಡ್ತಾ ಇಲ್ಲ. ಈ ಜಾಗವನ್ನ ಮಾರಾಟ ಮಾಡುವ ಹುನ್ನಾರ ಕೂಡ ನಡೆದಿದೆ. ಇದೆಲ್ಲದರ ವಿರುದ್ದ ಬೃಹತ್ ಪ್ರತಿಭಟನೆ ನಡೆಸಿ ಈ ವಿವಾದಕ್ಕೊಂದು ತಾತ್ವಿಕ ಅಂತ್ಯ ನೀಡಬೇಕು ಅಂತ ದಾದಾ ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ.
ಪುಣ್ಯಭೂಮಿಯನ್ನ ಪಡೆಯದೇ ಹಿಂದಿರುಗಲ್ಲ
ಡಾ.ವಿಷ್ಣುವರ್ಧನ್ಗೆ ಎಲ್ಲಾ ವಿಚಾರದಲ್ಲೂ ಅನ್ಯಾಯವಾಗಿದೆ. ಒಂದು ಪದ್ಮ ಪ್ರಶಸ್ತಿ ಸಿಗಲಿಲ್ಲ, ರಾಷ್ಟ್ರ ಪ್ರಶಸ್ತಿ ಸಿಗಲಿಲ್ಲ. ಕೊನೆಗೆ ಇಂಥ ಮಹಾನ್ ನಟನಿಗೆ ರಾಜಧಾನಿ ಬೆಂಗಳೂರಿನಲ್ಲಿ ಅಂಗೈ ಜಾಗವೂ ಇಲ್ವಾ ಅನ್ನೋದು ವಿಷ್ಣು ಅಭಿಮಾನಿಗಳ ಪ್ರಶ್ನೆ. ವೀರಕ ಪುತ್ರ ಶ್ರೀನಿವಾಸ್, ರಾಜು ಗೌಡ ನೇತೃತ್ವದಲ್ಲಿ ರಾಜ್ಯಾದ್ಯಂತ ಇರುವ ಡಾ.ವಿಷ್ಣು ಅಭಿಮಾನಿ ಸಂಘಗಳು ಈ ಪುಣ್ಯಭೂಮಿ ಹೋರಾಟಕ್ಕೆ ಕರೆಕೊಟ್ಟಿವೆ. ರಾಜ್ಯದ ನಾನಾ ಕಡೆಯಿಂದ ವಿಷ್ಣು ಅಭಿಮಾನಿಗಳು ಸೇರಲಿದ್ದಾರೆ. ಈ ಬಾರಿ ವಿಷ್ಣುದಾದಾ ಪುಣ್ಯಭೂಮಿಯನ್ನ ಪಡೆಯದೇ ಹಿಂದಿರುಗಲ್ಲ ಅಂತ ಪಣ ತೊಟ್ಟಿದ್ದಾರೆ.
- ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ