ಮಂಗಳೂರು : ಐದು ದಿನಗಳ ಪರ್ಯಂತ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಲಕ್ಷ ದೀಪೋತ್ಸವ ಸಂಪನ್ನಗೊಂಡಿದೆ.
ಐದು ದಿನಗಳ ಉತ್ಸವದಲ್ಲಿ ನಾಡಿನ ಮೂಲೆ ಮೂಲೆಯಿಂದ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದು ದೀಪೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ಮೇಳೈಸಿದ 800 ವರ್ಷಗಳ ಇತಿಹಾಸವುಳ್ಳ ಲಕ್ಷ ದೀಪೋತ್ಸವ ಇತಿಹಾಸದತ್ತ ಮುಖ ಮಾಡಿದೆ.
ಕೊನೆಯ ದಿನ ನಡೆದ 91ನೇ ವರ್ಷದ ಸಾಹಿತ್ಯ ಸಮ್ಮೇಳನದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರಸ್ತಾವಿಕ ಮಾತನಾಡಿದರು. ಯಾವ ದೇಶದಲ್ಲಿ ಕೃಷಿ ಇಲ್ಲವೋ ಆ ದೇಶ ದುರ್ಭಿಕ್ಷ ಕಾಣುತ್ತದೆ. ಅದೇ ರೀತಿ ಯಾವ ದೇಶದಲ್ಲಿ ಸಾಹಿತ್ಯ ಇಲ್ಲವೋ ಅಲ್ಲಿ ಬದುಕು ನಿಸ್ಸಾರವಾಗುತ್ತದೆ. ಹಾಗಾಗಿ, ಸಾಹಿತ್ಯದ ಬೇರಿಗೆ ಗೊಬ್ಬರ, ನೀರು ಹಾಕಿ ಪೋಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಾಚೀನ ಕಾವ್ಯ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗಾಗಿ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಆರಂಭಿಸಿದ್ದೇವೆ. ಅದರಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಚಂದ್ರಯಾನ-4 ಅಭಿಯಾನಕ್ಕೆ ಇಸ್ರೋ ಸಿದ್ಧತೆ
ಇಸ್ರೋ ವಿಜ್ಞಾನಿ ರಾಮಕೃಷ್ಣ ಬಿ.ಎನ್. ಮಾತನಾಡಿ, ಜಗತ್ತು ಇದುವರೆಗೂ ನೋಡದ ಚಂದ್ರನ ದಕ್ಷಿಣ ಧ್ರುವಕ್ಕೆ ಸಾಫ್ಟ್ ಲ್ಯಾಂಡ್ ಆಗುವ ಮೂಲಕ ಇಸ್ರೋ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಭವಿಷ್ಯದಲ್ಲಿ ಚಂದ್ರನ ಕಲ್ಲು, ಮಣ್ಣನ್ನು ಭೂಮಿಗೆ ತಂದು ಸಂಶೋಧನೆ ನಡೆಸುವ ಚಾರಿತ್ರಿಕ ಚಂದ್ರಯಾನ-4 ಅಭಿಯಾನಕ್ಕೆ ಇಸ್ರೋ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದರು.
ಅನುಭವ ಮತ್ತು ಭಾವನೆಗಳ ಅಭಿವ್ಯಕ್ತಿಯೇ ಸಾಹಿತ್ಯ.ಸಮಾಜಕ್ಕೆ ಹಿತವನ್ನುಂಟುಮಾಡುವುದೇ ಜಗತ್ತಿನ ಎಲ್ಲಾ ಸಾಹಿತ್ಯಗಳ ಮತ್ತು ಸಾಹಿತ್ಯ ಪ್ರಕಾರಗಳ ಆಶಯವಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಶುಭಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದ 91 ನೇ ಅಧಿವೇಶನ ನಡೆಯಿತು. pic.twitter.com/DfWMWn7wX6
— D. Veerendra Heggade (@HeggadeD) December 12, 2023