Wednesday, January 22, 2025

ಅಂದು ನನ್ನ ಬಳಿಯಿದ್ದ ಸ್ಕೂಟರ್​ನಲ್ಲಿ ಓಡಾಡುತ್ತಿದ್ದೆ : ಹಳೆ ನೆನಪು ಮೆಲುಕು ಹಾಕಿದ ಸಿದ್ದರಾಮಯ್ಯ

ಬೆಂಗಳೂರು : 1985ರಲ್ಲಿ ಜನತಾದಳದ ಪರವಾಗಿ ನಿಂತು ಗೆದ್ದ ಬಳಿಕ ಪಶುಸಂಗೋಪನೆ ಸಚಿವನಾಗಿ ಕೆಲಸ ನಿರ್ವಹಿಸಿದೆ. ಆ ಸಂದರ್ಭದಲ್ಲಿ ಕಾರಣಾತರಗಳಿಂದ ಸಚಿವ ಸ್ಥಾನ ಕಳೆದುಕೊಂಡೆ. ಆ ಸಂದರ್ಭದಲ್ಲಿ ನನ್ನ ಬಳಿಯಿದ್ದ ಸ್ಕೂಟರ್​ನಲ್ಲಿ ಓಡಾಡುತ್ತಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಳೆ ನೆನಪು ಮೆಲುಕು ಹಾಕಿದರು.

ಬೆಂಗಳೂರಿನಲ್ಲಿ ಖ್ಯಾತ ನಿರ್ದೇಶಕ, ಬರಹಗಾರ ಟಿ.ಎನ್. ಸೀತಾರಾಂ ಅವರ ‘ನೆನಪಿನ ಪುಟಗಳು’ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಜನತಾಪಾರ್ಟಿಯಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನನಗೆ ಪಕ್ಷದ ನಾಯಕರು ಪ್ರೋತ್ಸಾಹ ನೀಡಿದರು. ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದ ಮೇಲೆ ರಾಮಕೃಷ್ಣ ಹೆಗಡೆಯವರಿಗೆ ಬೆಂಬಲ ಸೂಚಿಸಿದೆ. ನಂತರ ಕಾವಲು ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 1984 ರಲ್ಲಿ ರೇಷ್ಮೆ ಸಚಿವನಾಗಿ ಕೆಲಸ ಮಾಡಿದೆ ಎಂದು ಹೇಳಿದರು.

ನಾನು ರಾಜಕೀಯಕ್ಕೆ ಬರಲು ನಂಜುಡಸ್ವಾಮಿ ಕಾರಣ

ಟಿ.ಎನ್. ಸೀತಾರಾಂ ಸುಮಾರು 40 ವರ್ಷಗಳ ಒಡನಾಟವಿರುವ ಆಪ್ತ ಸ್ನೇಹಿತ. ಕಾನೂನು ವಿದ್ಯಾರ್ಥಿಯಾಗಿದ್ದಾಗ ಪ್ರೊ. ನಂಜುಂಡಸ್ವಾಮಿಯವರು ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ಆಗ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸುತ್ತಿದ್ದರು. 1971ರಲ್ಲಿ ವೀರೆಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ, ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ನಾನು ಭಾಗಿಯಾಗಿದ್ದೆ. ನನ್ನ ರಾಜಕೀಯ ಜೀವನ ಪ್ರಾರಂಭವಾಗಲು ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದು ತಿಳಿಸಿದರು.

ಸೀತಾರಾಂ ಶಾಸಕರಾಗುವ ಸಾಧ್ಯತೆಯೂ ಇತ್ತು

ಸೀತಾರಾಂ ಅವರು ಬದುಕಿನ ಎಲ್ಲ ಸ್ತರಗಳ ಅನುಭವ ಇರುವವರು. ವಿದ್ಯಾರ್ಥಿ ದೆಸೆ, ಸ್ನೇಹಿತರ ಒಡನಾಟ, ರಾಜಕೀಯ, ಕಲಾ ಸೇವೆಯಲ್ಲಿ ತೊಡಗಿರುವ ಸೀತಾರಾಂ ಅವರು ಬಹುಮುಖ ಪ್ರತಿಭೆ. ರಾಮಕೃಷ್ಣ ಹೆಗಡೆಯವರ ಆಪ್ತರಾಗಿರುವವರು. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದಿದ್ದರೆ, ಶಾಸಕರಾಗುವ ಸಾಧ್ಯತೆಯೂ ಇತ್ತು. ರಾಮಕೃಷ್ಣ ಹೆಗಡೆಯವರಿಗೆ ಬಹಳ ಜನಪ್ರಿಯತೆ ಇದ್ದ ಕಾರಣ, ಜನತಾ ಪಾರ್ಟಿ ಪರವಾದ ಅಲೆ ಇತ್ತು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹಿರಿಯ ನಟ ಹಾಗೂ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್.ಎಲ್ ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES