Wednesday, May 1, 2024

ಮಹದೇಶ್ವರ ಬೆಟ್ಟ : ಬೆಂಕಿ ಅವಘಡದಲ್ಲಿ 10 ಲಕ್ಷ ಮೌಲ್ಯದ ವಸ್ತುಗಳು ನಾಶ, ನೌಕರ ಅಮಾನತು

ಚಾಮರಾಜನಗರ : ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಲಾಡು ತಯಾರಿಕಾ ಕೇಂದ್ರದಲ್ಲಿ ನಿನ್ನೆ (ಶುಕ್ರವಾರ) ಸಂಭವಿಸಿದ ಬೆಂಕಿ ಅವಘಡದಲ್ಲಿ ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿದೆ.

ಈ ಪ್ರಕರಣ ಕುರಿತು ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಹಿರಿಯ ಅಧಿಕಾರಿಗಳ ಆದೇಶದನ್ವಯ ಲಾಡು ಪ್ರಸಾದ ಘಟಕದ ದ್ವಿತೀಯ ದರ್ಜೆ ಸಹಾಯಕ ಕೆ.ಪಿ ಮಹದೇವಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಲಾಡು ಪ್ರಸಾದ ತಯಾರಿಕ ಕೇಂದ್ರದಲ್ಲಿ ನಡೆದ ಬೆಂಕಿ ಅವಘಡ ಪ್ರಕರಣದಲ್ಲಿ 36 ಸಾವಿರ ಲಾಡು ಭಸ್ಮವಾಗಿದೆ. ಸುಮಾರು 10 ಲಕ್ಷ ರೂ. ಮೌಲ್ಯದ ವಸ್ತು ನಾಶವಾಗಿದೆ. 36,220 ಲಾಡು, 28 ಟಿನ್ ಎಣ್ಣೆ, 50 ಕಿಲೋನ 9 ಮೂಟೆ ಸಕ್ಕರೆ, 30 ಕಿಲೋ ದ್ರಾಕ್ಷಿ, 40 ಕಿಲೋ ನಂದಿನಿ ತುಪ್ಪ, 96 ಕಿಲೋ ಕಡ್ಲೆ ಹಿಟ್ಟು ನಾಶವಾಗಿದೆ ಎಂದು ಹೇಳಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣವೇನು?

ಲಾಡು ಪ್ರಸಾದ ತಯಾರಿಕ ಘಟಕದಲ್ಲಿ ಸಿಲಿಂಡರ್ ನಲ್ಲಿ ಅನಿಲ ಸೋರಿಕೆಯಾಗಿದೆ. ಸಿಲಿಂಡರ್ ಪೈಪ್ ಲೈನ್ ಸಂಪೂರ್ಣ ಹಾನಿಯಾಗಿದ್ದ ಹಿನ್ನೆಲೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದಲ್ಲಿ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ 10.2 ಲಕ್ಷ ರೂಪಾಯಿ ನಷ್ಟವಾಗಿದೆ. ಘಟನೆಯ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಮುಂದಿನ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES