ಬೆಂಗಳೂರು : ಹಬ್ಬ-ಹರಿದಿನಗಳು ಮುಗಿಯುತ್ತಿದ್ದಂತೆ ಇದೀಗ ಮದುವೆ ಸೀಸನ್ ಜೋರಾಗಿದೆ. ಇದರಿಂದ ಸಿಲಿಕಾನ್ ಸಿಟಿ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು ಶುರುವಾಗಿದೆ. ಇತ್ತ ಕಲ್ಯಾಣ ಮಂಟಪಗಳು ಸೋಲ್ಡ್ ಔಟ್ ಆಗಿದ್ದರೆ, ಮದುವೆ ಡೆಕೋರೆಟರ್‌ಗಳು ಫುಲ್ ಬ್ಯುಸಿ ಆಗಿದ್ದಾರೆ.
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು ಹಿರಿಯರು ಅನುಭವದ ಮಾತನ್ನು ಹೇಳಿರುವುದು ಸುಮ್ಮನೇ ಅಲ್ಲ. ಮದುವೆ ಅನ್ನೋದು ಇಬ್ಬರ ಬಾಳಿನಲ್ಲಿ ಒಂದು ಪ್ರಮುಖ ಘಟ್ಟವಾದರೆ ಅದರಿಂದ ಅದೆಷ್ಟೋ ಜನರ ಹೊಟ್ಟೆ, ಬಟ್ಟೆಗೆ, ಜೀವನ ನಡೆಯುತ್ತದೆ.
ಕಳೆದ 4 ತಿಂಗಳಿಂದ ಮದುವೆ ಸೀಜನ್ ಶುರುವಾಗಿದ್ದು, ಫ್ಲವರ್ ಡಕೋರೆಟರ್, ವಾದ್ಯ ತಂತುಗಾರರು, ಅಡುಗೆ ಭಟ್ಟರು, ಪುರೋಹಿತರು, ವೆಡ್ಡಿಂಗ್ ಫೋಟೋ ಶೂಟ್ ಮಾಡುವ ಛಾಯಗ್ರಾಹಕರು ಸೇರಿದಂತೆ ಅದೆಷ್ಟೋ ಜನರು ಈ ಸೀಜನಲ್ಲಿ ಹೆಚ್ಚು ಆದಾಯ ಗಳಿಸಿದ್ದು, ಪುಲ್‌ಖುಷ್ ಆಗಿದ್ದಾರೆ.
ಏಳಕ್ಕಿಂತ ಹೆಚ್ಚು ಶುಭ ಲಗ್ನಗಳು
ನವೆಂಬರ್ 23ರಿಂದ ಉತ್ಥಾನ ಏಕಾದಶಿಯಂದು ಮದುವೆ ಸೀಜನ್ ಪ್ರಾರಂಭವಾಗಿದ್ದು, ನವೆಂಬರ್ ಡಿಸೆಂಬರ್‌ನಲ್ಲಿ ಸುಮಾರು ಏಳಕ್ಕಿಂತ ಹೆಚ್ಚು ಶುಭ ಲಗ್ನಗಳಂದು ಎಲ್ಲಾ ಕಲ್ಯಾಣ ಮಂಟಪಗಳು ಮುಂಗಡವಾಗಿ ಬುಕ್ ಆಗಿವೆ. ಜೊತೆಗೆ ಕಳೆದ ನಾಲ್ಕು ತಿಂಗಳಿಂದ ಕಳೆಗುಂದಿದ್ದ ವ್ಯಾಪಾರ ವಹಿವಾಟು ಇದೀಗ ಜೋರಾಗಿದೆ.
ಒಟ್ಟಾರೆ, ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವವರಿಂದ ನಗರದ ಮಾರುಕಟ್ಟೆ ವಹಿವಾಟು ಜೋರಾಗಿ ನಡೆಯುತ್ತಿದೆ. ಇದರಿಂದ ವ್ಯಾಪಾರಸ್ಥರು ಲಾಭದ ನಿರೀಕ್ಷೆಯಲ್ಲಿ ಬಹಳ ಖುಷಿಯಾಗಿದ್ದಾರೆ.