ಬೆಂಗಳೂರು : ಈಗ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ನಮ್ಮ ಆಯ್ಕೆಯಿಂದ ಕಂಗೆಟ್ಟಿದ್ದಾರೆ. ಇದು ರೈತ ವಿರೋಧಿ ಸರ್ಕಾರ ಅಂತ ಜನ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಕಿದರು.
ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆಯಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್. ಅಶೋಕ್ ಅವರು 7 ಬಾರಿ ಶಾಸಕರಾಗಿ, ಡಿಸಿಎಂ ಆಗಿ, ಹಲವು ಖಾತೆ ಸಚಿವರಾಗಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ ಎಂದು ಹೇಳಿದರು.
ಕಳೆದ ಆರು ತಿಂಗಳಿಂದ ಆಡಳಿತ ಪಕ್ಷ ಕಾಂಗ್ರೆಸ್ ನಮ್ಮನ್ನ ಟೀಕೆ ಮಾಡ್ತಿದ್ರು. ಆರು ತಿಂಗಳಾಯ್ತು ವಿಪಕ್ಷ ನಾಯಕರಿಲ್ಲ, ರಾಜ್ಯಾಧ್ಯಕ್ಷ ಇಲ್ಲ ಅಂತ ಟೀಕೆ ಮಾಡ್ತಿದ್ರು. ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನದಿಂದ ನನ್ನನ್ನು ಮತ್ತು ಆರ್. ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ. ಒಂದು ಕಡೆ ಬೀಕರ ಬರಗಾಲ ಇದೆ. ಬಿಜೆಪಿ ಅಧ್ಯಕ್ಷರಾಗಿ, ವಿಪಕ್ಷ ನಾಯಕರಾಗಿ ಅಶೋಕ್ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ದಿಕ್ಸೂಚಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ದುಡಿಯುತ್ತೇವೆ. ಲೋಕಸಭಾ ಚುನಾವಣೆ ದಿಕ್ಸೂಚಿ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಮೂರನೇ ಬಾರಿ ಪ್ರಧಾನಿ ಮಾಡಲಿದ್ದೇವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ 28 ಕ್ಷೇತ್ರ ಗೆಲ್ಲುವ ಮೂಲಕ ಕೇಂದ್ರಕ್ಕೆ ಶಕ್ತಿ ತುಂಬುತ್ತೇವೆ ಎಂದು ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.