ಬೆಂಗಳೂರು : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ಪುತ್ರ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ವಿಚಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರರಿಗೆ ಒಳ್ಳೆಯದಾಗಲಿ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಬಿಜೆಪಿ ಯುವಕರಿಗೆ ಪ್ರೋತ್ಸಾಹ ನೀಡುತ್ತೆ
ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಮಾಜಿ ಸಚಿವ ಗೋವಿಂದ ಕಾರಜೋಳ ಶುಭ ಕೋರಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಯುವಕರಿಗೆ ಪ್ರೋತ್ಸಾಹ ಕೊಡುತ್ತೆ ಎಂಬುದನ್ನು ಬಿಜೆಪಿ ತೋರಿಸಿದೆ. ಯಡಿಯೂರಪ್ಪ ಅವರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೂ ಸಿಕ್ಕಿದೆ. ವಿಜಯೇಂದ್ರ ಅವರ ನಾಯಕತ್ವದಲ್ಲಿ ಯುವಕರು ಸಂಘಟಿತರಾಗಿ 25ಕ್ಕೂ ಅಧಿಕ ಲೋಕಸಭೆ ಸೀಟ್ ಗೆಲ್ಲಿಸಲಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಮೋದಿ ಮಾಡಿರುವ ನಾಟಕ
ಜೂನ್ ನಂತರ ನೂತನ ರಾಜ್ಯಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅಧ್ಯಕ್ಷರಾಗಿ ಉಳಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಲಿಂಗಾಯತರು ಬಿಜೆಪಿ ಬಿಟ್ಟಿದ್ದಾರೆ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮಾಡಿರುವ ನಾಟಕ. ನಾಟಕದ ಸ್ಕ್ರೀಪ್ಟ್ ರಚನೆ ಮಾಡಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಕುಟುಕಿದ್ದಾರೆ.
ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ
ಜೂನ್ ನಂತರ ಬಿಜೆಪಿ ಅಧ್ಯಕ್ಷರಾಗಿರಲು ಬಿಡಲ್ಲ. ಬಿ.ವೈ. ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ. ಲಿಂಗಾಯತ ಸಮುದಾಯವನ್ನು ಸಮಾಧಾನ ಮಾಡಲು ಆಡಿರುವ ನಾಟಕ. ನಾಟಕವನ್ನ ನಂಬಿ ಲಿಂಗಾಯತರು ಯಾಮಾರಬೇಡಿ ಎಂದು ಎಂ ಲಕ್ಷ್ಮಣ್ ಹೇಳಿದ್ದಾರೆ.