ಬೆಂಗಳೂರು : ಹಮಾಸ್ ಉಗ್ರ ಸಂಘಟನೆ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ನಿರ್ಣಾಯಕ ಹಂತದತ್ತ ಸಾಗಿದೆ. ಇಡೀ ಗಾಜಾ ನಗರವನ್ನು ಇಸ್ರೇಲ್ ಸೇನೆ ಸುತ್ತುವರೆದು ನೆಲದ ಕಾರ್ಯಾಚರಣೆ ಆರಂಭಿಸಿದೆ.
ಹಮಾಸ್ ನಿಯಂತ್ರಿತ ಗಾಜಾ ನಗರವನ್ನು ಇಸ್ರೇಲ್ ಸೇನೆ ಸಂಪೂರ್ಣವಾಗಿ ಸುತ್ತುವರೆದಿರುವುದಾಗಿ ಹೇಳಿಕೊಂಡಿದ್ದು, ಹಮಾಸ್ ಉಗ್ರರ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವುದಾಗಿ ಹೇಳಿದೆ. ಇಸ್ರೇಲಿ ಸೈನಿಕರು ಭಯೋತ್ಪಾದಕ ಸಂಘಟನೆ ಹಮಾಸ್ನ ಕೇಂದ್ರ ತಾಣವಾದ ಗಾಜಾ ನಗರವನ್ನು ಸುತ್ತುವರಿಯುವುದನ್ನು ಪೂರ್ಣಗೊಳಿಸಿದೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.
ಕದನ ವಿರಾಮದ ಪರಿಕಲ್ಪನೆಯು ಪ್ರಸ್ತುತ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎಂದು ಪಣ ತೊಟ್ಟಿರುವ ಇಸ್ರೇಲ್ ಸೇನೆಯು ಗಾಜಾ ನಗರದ ಮೇಲೆ ಬಿಗಿ ಹಿಡಿತ ಸಾಧಿಸುತ್ತಿದೆ. ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಲು ಗಡಿಯಲ್ಲಿ ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? : ಇಸ್ರೇಲ್ ಮೇಲಿನ ದಾಳಿಗೆ 4 ಕೋಟಿ ಕದ್ದ ಹಮಾಸ್
ನೆಟ್‌ವರ್ಕ್, ಇಂಟರ್‌ನೆಟ್ ಸೇವೆ ಸ್ಥಗಿತ
ಇನ್ನು ಇದರ ಬೆನ್ನಲ್ಲೇ, ಗಾಜಾ ನಗರದಲ್ಲಿ ಮೊಬೈಲ್ ನೆಟ್‌ವರ್ಕ್, ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಈಗ ಗಾಜಾ ನಾಗರಿಕರು ಹಾಗೂ ಉಗ್ರರನ್ನು ಆತಂಕಕ್ಕೀಡು ಮಾಡಿದೆ ಎಂದು ತಿಳಿದುಬಂದಿದೆ.