Friday, May 17, 2024

ಶಾಸಕ ಹರೀಶ್ ಪೂಂಜಾ ಪಾಪ ಇನ್ನೂ ರಾಜಕೀಯದಲ್ಲಿ ಬಚ್ಚಾ : ಸಿದ್ದರಾಮಯ್ಯ

ಮಂಗಳೂರು : ಸಿದ್ದರಾಮಯ್ಯ ಬಗ್ಗೆ ಶಾಸಕ ಹರೀಶ್ ಪೂಂಜಾ ಪೇಜ್​ನಲ್ಲಿ ಕಲೆಕ್ಷನ್ ಮಾಸ್ಟರ್ ಹೇಳಿಕೆ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರೀಶ್ ಪೂಂಜಾ ಶಾಸಕನಾಗಿರೋದು ಮೊನ್ನೆ. ನಾನು 83ರಿಂದ ಶಾಸಕನಾಗಿ, 85ರಲ್ಲೇ ಮಿನಿಸ್ಟರ್ ಆಗಿದ್ದವನು. ಆವತ್ತು ಯಾರು ನನ್ನ ಈ ರೀತಿ ಕರೆದಿರಲಿಲ್ಲ. ಇವರು ಪಾಪ ಇನ್ನೂ ರಾಜಕೀಯದಲ್ಲಿ ಬಚ್ಚಾ ಎಂದು ಗುಡುಗಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಮುಖ್ಯಮಂತ್ರಿಗಳಿಗೆ ಈ ರೀತಿ ಹೇಳಲಿ. 50 ಕೋಟಿ ಆಫರ್ ಬಗ್ಗೆ ನನಗೆ ಗೊತ್ತಿಲ್ಲ, ರವಿ ಹತ್ತಿರ ಕೇಳಿ. ಯಾರು ಹೇಳಿದ್ರೋ ಅವರತ್ರ ಕೇಳಿ, ನನಗೆ ಯಾವುದೇ ಮಾಹಿತಿ ಬಂದಿಲ್ಲ. ಬಿಜೆಪಿಯವರು ನಮ್ಮ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸ್ತಾ ಇದಾರೆ ಅನ್ನೋ ಮಾಹಿತಿ ಇದೆ. 50 ಕೋಟಿ ಕೊಟ್ಟು ಅಧಿಕಾರ ಆಫರ್ ಮಾಡ್ತಾ ಇದಾರೆ ಅನ್ನೋ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಗೃಹ ಸಚಿವ ಡಾ.ಜಿ ಪರಮೇಶ್ವರ್ ಊಟಕ್ಕೆ ಕರೆದಿದ್ರು, ಹೋಗಿದೀವಿ. ಅದಕ್ಕೆ ಮಸಾಲೆ ಯಾಕೆ ಹಾಕ್ತೀರಾ? ಅವರು ನನಗೆ, ಮಹಾದೇವಪ್ಪ, ಸತೀಶ್ ಜಾರಕಿಹೊಳಿಗೆ ಊಟಕ್ಕೆ ಕರೆದಿದ್ದರು. ಅಲ್ಲಿ ಯಾವುದೇ ರಾಜಕೀಯ ಇಲ್ಲ, ಅದೆಲ್ಲಾ ಸುಳ್ಳು, ಬಣ್ಣ ಕಟ್ಟಲಾಗ್ತಿದೆ. ಮೊದಲ ಹಂತದಲ್ಲಿ ಕೆಲ ಶಾಸಕರಿಗೆ ನಿಗಮ ಮಂಡಳಿ ಕೊಡ್ತೇವೆ. ಎರಡನೇ ಹಂತದಲ್ಲಿ ಕಾರ್ಯಕರ್ತರು, ನಾಯಕರಿಗೆ ಶೀಘ್ರವಾಗಿ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಕೇಂದ್ರ ಮಲತಾಯಿ ಧೋರಣೆ ಹೊಂದಿದೆ

ನಾವು ಬರ ಪರಿಹಾರ 7,900 ಕೋಟಿ ಕೇಳಿದ್ದೇವೆ. ಆದರೆ, ಕೇಂದ್ರ ಸರ್ಕಾರ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಹೊಂದಿದೆ ಎಂದು ಬೇಸರಿಸಿದ್ದಾರೆ. ಇದೇ ವೇಳೆ ಪರಶುರಾಮ ಮೂರ್ತಿ ಬಗ್ಗೆ ವಿವಾದದ ಬಗ್ಗೆ ಮಾತನಾಡಿದ ಅವರು, ಕಾರ್ಕಳ ಪರಶುರಾಮ ಮೂರ್ತಿ ಅಸಲಿನಾ? ನಕಲಿನಾ ತನಿಖೆ ಆಗಲಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES