ಚೆನ್ನೈ : ವಿಶ್ವಕಪ್-2023 ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಹೊಮ್ಮಿದೆ. ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ ಪಾಕ್ ಹ್ಯಾಟ್ರಿಕ್ ಸೋಲು ಅನುಭವಿಸಿತು.
ಚೆನ್ನೈನ ಎಂ.ಎ ಚಿದಂಬರಂ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಪಾಕ್ ಲೆಕ್ಕಾಚಾರವನ್ನ ಅಫ್ಘಾನಿಸ್ತಾನ ತಲೆಕೆಳಗಾಗಿಸಿತು.
ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 282 ರನ್ ಕಲೆಹಾಕಿತ್ತು. 283 ರನ್ಗಳ ಕಠಿಣ ಟಾರ್ಗೆಟ್ ಬೆನ್ನತ್ತಿದ ಅಫ್ಘಾನಿಸ್ತಾನ 49 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಜದ್ರಾನ್, ಗುರ್ಬಾಜ್ ಬೊಂಬಾಟ ಆಟ
ಅಘ್ಫಾನಿಸ್ತಾನದ ಪರ ಇನ್ನಿಂಗ್ಸ್ ಆರಂಭಿಸಿದ ಇಬ್ರಾಹಿಂ ಜದ್ರಾನ್ ಹಾಗೂ ಗುರ್ಬಾಜ್ ಪಾಕ್ ಬೌಲರ್ಗಳನ್ನು ಯಮನಂತೆ ಕಾಡಿದರು. ಇಬ್ಬರೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಬಳಿಕ ಬಂದ ರಹಮತ್ ಶಾ ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ ಅಜೇಯರಾಗಿ ಉಳಿದುಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಎರಡನೇ ಗೆಲುವು ಸಾಧಿಸಿತು.