Monday, May 20, 2024

ಸಾರ್.. ನನ್ನ ಪತ್ನಿ ಕನ್ನಡ-ಉರ್ದು ಭಾಷೆಯನ್ನೂ ಕಲಿಸಿದ್ದಾಳೆ : ಬಿಜೆಪಿ ಸತ್ಯ ಶೋಧನಾ ಸಮಿತಿ ಮುಂದೆ ಶಿಕ್ಷಕ ದಂಪತಿ ಕಣ್ಣೀರು

ಶಿವಮೊಗ್ಗ : ಕೋಮು ದಳ್ಳುರಿಗಳ ಆಕ್ರೋಶಕ್ಕೆ ರಾಗಿಗುಡ್ಡ ನಲುಗಿತ್ತು. ಇದೀಗ ರಾಗಿಗುಡ್ಡದಲ್ಲಿ ಶಾಂತಿ ನೆಲೆಸಿದ್ದು, ಇಂದು ಬಿಜೆಪಿ ನಿಯೋಗ ರಾಗಿಗುಡ್ಡಕ್ಕೆ ಭೇಟಿ ನೀಡಿ, ಸಂತ್ರಸ್ತರನ್ನು ವಿಚಾರಿಸಿತು. ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದೆ.

ಬಿಜೆಪಿ ಸತ್ಯಶೋಧನಾ ಸಮಿತಿ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಿಯೋರ್ವರು ಅಳಲು ತೋಡಿಕೊಂಡಿದ್ದಾರೆ. ನನ್ನ ಪತ್ನಿಯಿಂದ ಪಾಠ ಕಲಿತವರೇ ಈಗ ಕಲ್ಲು ಹೊಡೆದಿದ್ದಾರೆ ಸಾರ್​​​​​​​.. ನನ್ನ ಪತ್ನಿ ಕನ್ನಡದೊಂದಿಗೆ ಉರ್ದು ಭಾಷೆಯನ್ನೂ ಕೂಡ ಕಲಿಸಿದ್ದಾಳೆ. ಇದನ್ನೇ ಮಕ್ಕಳಿಗೆ ಬೋಧಿಸಿದ್ದಾಳೆ. ಆದರೆ, ಆ ಪಾಠ ಕಲಿತ ಮಕ್ಕಳೇ ಇಂದು ನಮ್ಮ ಮನೆ ಮೇಲೆ ಕಲ್ಲು ಹೊಡೆದು ದಾಳಿ ನಡೆಸಿದ್ದಾರೆ ಎಂದು ಶಿಕ್ಷಕ ದಂಪತಿ ಕಣ್ಣೀರು ಹಾಕಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ದಾಳಿಗೆ ತುತ್ತಾಗಿರುವ ಮನೆಗಳನ್ನು ವೀಕ್ಷಿಸಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಸುಮಾರು ಒಂದುವರೆ ಗಂಟೆಗಳ ಕಾಲ ವೀಕ್ಷಣೆ ನಡೆಸಿ, ಅಲ್ಲಿನ ಸ್ಥಳೀಯರೊಂದಿಗೆ ಪರಾಮರ್ಶೆ ನಡೆಸಿದರು. ದಾಳಿಗೊಳಗಾದ ಸ್ಥಳೀಯ ನಿವಾಸಿಗಳಲ್ಲಿ ಘಟನೆ ಕುರಿತು ಮಾಹಿತಿ ಪಡೆದರು. ಘಟನೆಗೆ ಕಾರಣವೇನೆಂದು ಪ್ರಶ್ನಿಸಿ, ಸಮಾಲೋಚನೆ ನಡೆಸಿದರು.

ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹ

ಇನ್ನು ಇದಕ್ಕೂ ಮುನ್ನಾ ನಗರದ ಮೆಗ್ಗಾನ್​​ ಆಸ್ಪತ್ರೆಗೆ ಭೇಟಿ ನೀಡಿ ಅಂದಿನ ಗಲಭೆ ವೇಳೆ ಗಾಯಗೊಂಡಿದ್ದವರನ್ನು ಭೇಟಿ ಮಾಡಿದರು. ಅವರಿಗೆ ಸಾಂತ್ವನ ಹೇಳಿದರು. ಗಾಯಾಳುಗಳ ಬಳಿ ಅಂದು ಘಟನೆ ದಿನದ ವಿವರನ್ನು ಕಲೆ ಹಾಕಿ, ಕಲ್ಲು ತೂರಾಟ ಹೇಗಾಯ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ರು. ಈ ವೇಳೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ, ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಹಲವಾರು ಕಡೆ ಕೋಮುಗಲಭೆ ನಡೆದಿದೆ. ಈ ಎಲ್ಲಾ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ, ಗಲಭೆಯಿಂದಾಗಿ ಪ್ರಕ್ಷುಬ್ಧವಾಗಿದ್ದ ರಾಗಿಗುಡ್ಡ ತಣ್ಣಗಾಗಿದ್ದು, ಬಿಜೆಪಿ ನಿಯೋಗ ಸಾಂತ್ವನ ಹೇಳುವ ಕಾರ್ಯ ಮಾಡಿದೆ. ಇನ್ನು ಈ ಪ್ರಕರಣ ರಾಜಕೀಯವಾಗಿ ಯಾವೆಲ್ಲಾ ತಿರುವುಗಳ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES