ಬೆಂಗಳೂರು : ಕಾಂಗ್ರೆಸ್ನ ಆಪರೇಷನ್ ಹಸ್ತಕ್ಕೆ ಜೆಡಿಎಸ್ ಪಕ್ಷದ ಮತ್ತೊಂದು ವಿಕೆಟ್ ಪತನವಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ತವರು ಜಿಲ್ಲೆಯಲ್ಲಿಯೇ ದೊಡ್ಡ ಶಾಕ್ ನೀಡಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಜೆಡಿಎಸ್ನ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಅವರು ಜೆಡಿಎಸ್ ತ್ಯಜಿಸಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಅಶ್ವತ್ಥ್ ಹಾಗೂ ಅವರ ಬೆಂಬಲಿಗರಿಗೆ ಪಕ್ಷದ ಬಾವುಟ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ. ಎಂ.ಸಿ. ಅಶ್ವತ್ಥ್ ಅವರು 2009ರ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್, ಸಚಿವರಾದ ರಾಮಲಿಂಗಾರೆಡ್ಡಿ, ಬಿ.ಝಡ್ ಜಮೀರ್ ಅಹಮ್ಮದ್, ವಿನಯ್ ಕುಲಕರ್ಣಿ, ಸಲೀಂ ಅಹಮ್ಮದ್ ಮತ್ತಿತರಿದ್ದರು.
ಅಶ್ವತ್ಥ್ ಅವರನ್ನು ಸ್ವಾಗತಿಸುತ್ತೇವೆ
ಸಂಸದ ಡಿ.ಕೆ ಸುರೇಶ್ ಅಧ್ಯಕ್ಷತೆಯಲ್ಲಿ ಚನ್ನಪಟ್ಟಣದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಜೆಡಿಎಸ್ ಮಾಜಿ ಶಾಸಕ ಎಂ.ಸಿ ಅಶ್ವಥ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿತ್ತು. ಎಂ.ಸಿ ಅಶ್ವತ್ಥ್ ಅವರನ್ನು ಸ್ವಾಗತಿಸುತ್ತೇವೆ. ಅಶ್ವಥ್ ರವರು ಕಳೆದ 30 ವರ್ಷದಿಂದ ರಾಜಕೀಯ ಮಾಡ್ತಿದ್ದಾರೆ. ಅವರು ಈಗ ಕಾಂಗ್ರೆಸ್ ಗೆ ಸೇರುತ್ತಿದ್ದಾರೆ ಎಂದು ಹೇಳಿದ್ದರು.