Sunday, May 19, 2024

ಲಂಕಾ ದಹನ.. ಭಾರತಕ್ಕೆ ಭರ್ಜರಿ ಗೆಲುವು

ಬೆಂಗಳೂರು : ಜೈ ಹೋ..! ರಾವಣನ ನೆಲದಲ್ಲಿ ಲಂಕಾ ದಹನ! ಬೊಂಬಾಟ್ ಬ್ಯಾಟಿಂಗ್ ಮೂಲಕ ನಿನ್ನೆ ಬದ್ಧ ವೈರಿ ಪಾಕಿಗಳ ಹುಟ್ಟಡಗಿಸಿದ್ದ ಭಾರತ, ಇಂದು ಬೌಲಿಂಗ್​ನಲ್ಲಿ ಕಮಾಲ್ ಮಾಡಿ ಲಂಕಾ ದಹನ ಮಾಡಿದೆ.

ಕೊಲಂಬೊದ ಆರ್​. ಪ್ರೇಮದಾಸ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 41ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಭಾರತ ಫೈನಲ್​ಗೆ ಲಗ್ಗೆ ಇಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಲಂಕಾ ಸ್ಪಿನ್ ದಾಳಿಗೆ ತತ್ತರಿಸಿತು. 49.1 ಓವರ್ ಗಳಲ್ಲಿ 213 ರನ್​ ಗಳಿಸಿ ಆಲ್​ಔಟ್ ಆಯಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ ಅರ್ಧಶತಕ (53) ಸಿಡಿಸಿದರು. ಶುಭ್ಮನ್ ಗಿಲ್ 19, ಕೆ.ಎಲ್ ರಾಹುಲ್​ 39, ಇಶಾನ್ ಕಿಶನ್ 33, ಅಕ್ಷರ್ ಪಟೇಲ್ 26 ರನ್​ ಗಳಿಸಿದರು.

ಭಾರತ ನೀಡಿದ 214 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಪಡೆ ಭಾರತದ ವೇಗಿಗಳ ಶಿಸ್ತುಬದ್ದ ದಾಳಿಗೆ ಧ್ವಂಸವಾಯಿತು. 41.3 ಓವರ್​ಗಳಲ್ಲಿ 172 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 41 ರನ್​ಗಳ ಜಯ ಗಳಿಸಿತು. ಭಾರತದ ಪರ ಕುಲ್ದೀಪ್ ಯಾದವ್ 4, ರವೀಂದ್ರ ಜಡೇಜಾ ಹಾಗೂ ಬುಮ್ರಾ ತಲಾ 2, ಸಿರಾಜ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಏಕಾಂಗಿ ಹೋರಾಟ ವ್ಯರ್ಥ

ಲಂಕಾ ಪರ ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಏಕಾಂಗಿ ಹೋರಾಟ ನಡೆಸಿದ ಯುವ ಸ್ಪಿನ್ನರ್ ದುನಿತ್ ಆಟ ವ್ಯರ್ಥವಾಯಿತು. ಬೌಲಿಂಗ್​ನಲ್ಲಿ ಕಮಾಲ್ ಮಾಡಿದ ದುನಿತ್, ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ (5 ವಿಕೆಟ್) ಪಡೆದು ಮರ್ಮಾಘಾತ ನೀಡಿದರು.

ಲಂಕಾಗೆ ಬಲ ತುಂಬಿದ ದುನಿತ್

ಬಳಿಕ ಬ್ಯಾಟಿಂಗ್​ನಲ್ಲಿ ಲಂಕಾ ಪಡೆಗೆ ಬಲ ತುಂಬಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದರು. 46 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್​ನೊಂದಿಗೆ ಅಜೇಯ 42 ರನ್ ಗಳಿಸಿದರು. ಆಲ್​ರೌಂಡ್ ಪ್ರದರ್ಶನ ನೀಡಿದ ದುನಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಜನರಾಗಿದ್ದು ಮತ್ತೊಂದು ವಿಶೇಷ.​

RELATED ARTICLES

Related Articles

TRENDING ARTICLES