Sunday, May 12, 2024

ಮಗಳ ಹೆಸರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ‘ಅಕ್ಷರ ದಾಸೋಹ’

ತುಮಕೂರು : ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ಮೂಗು ಮುರಿಯುವ ಅನೇಕರು ನಮ್ಮ ಮುಂದಿದ್ದಾರೆ. ಅಯ್ಯೋ ಹೆಣ್ಣು ಮಗುವಾಯಿತೇ ಎಂದು ನಿರಾಸೆಯಾಗ್ತಾರೆ. ಇಂಥ ಜನರ ನಡುವೆ ಮಗಳೇ ಸರ್ವಸ್ವ, ಮಗಳೇ ಜೀವ ಎನ್ನುವ ತಂದೆಯೋರ್ವರು ಮಗಳಿಗಾಗಿ ತಮ್ಮ ಜೀವನವನ್ನೇ ಮುಟಿಪಾಗಿಟ್ಟಿದ್ದಾರೆ. ಮಗಳ ಹೆಸರು ಅಜರಾಮರವಾಗುವಂತೆ ಮಾಡಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ನಿಜಕ್ಕೂ ಮಾದರಿಯಾಗಿದ್ದಾರೆ. ಇವರು ಗೋಸಲ ಚನ್ನಬಸವೇಶ್ವರ ಸೌರ್ಹಾದ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರು ಆಗಿದ್ದು, SG ಗ್ರೂಪ್ ಇನ್ಸೂರೇನ್ಸ್ ಸರ್ವಿಸ್ ಪ್ರೈ.ಲಿ ಮಾಲೀಕರು ಹೌದು.

ಮಗಳ ಹೆಸರಲ್ಲಿ ಆದ್ಯ ಫೌಂಡೇಶನ್

ಗಿರೀಶ್ ತಂದೆ ಸಹ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡಿದವರು. ಅವರ  ಮಗನಾಗಿ ಹುಟ್ಟಿ ಬಡತನದಲ್ಲೇ ಬೆಳೆದು SG ಗ್ರೂಪ್​​ನಲ್ಲಿ ಹಲವು ಉದ್ಯಮಗಳನ್ನ ಆರಂಭಿಸಿ, ಬಡತನವನ್ನ ಮೆಟ್ಟಿನಿಂತಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಅಪಾರ ಗೌರವ ಇರುವ ಇವರು, ತನ್ನ ಮಗಳು ಆದ್ಯ ಹೆಸರಲ್ಲಿ ಮಗಳ ಹುಟ್ಟು ಹಬ್ಬದ ದಿನದಂದು ಆದ್ಯ ಫೌಂಡೇಶನ್ ಆರಂಭಿಸಿ ಅವಳ ಹೆಸರು ಅಜರಾಮರವಾಗಿರುವಂತೆ ಮಾಡುವುದಲ್ಲದೇ ತಮ್ಮನ್ನ ತಾವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಹೊರಟಿದ್ದಾರೆ.

ಪರಮೇಶ್ವರ್ ದಂಪತಿ ಆಶೀರ್ವದ

ಇನ್ನು ಈ ಆದ್ಯ ಫೌಂಡೇಶನ್ ಉದ್ಘಾಟನಾ ಸಮಾರಂಭವನ್ನು ಗುಬ್ಬಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದು, ಈ ವೇಳೆ ಸಾವಿರಾರು ಜನರಿಗೆ ಆರೋಗ್ಯ ತಪಾಸಣೆ ನಡೆಸಿದರಲ್ಲದೇ ಯಾವೊಬ್ಬ ರಾಜಕಾರಣಿಯೂ ಮಾಡಲಾಗದ ಕೆಲಸ ಮಾಡಿದ್ದಾರೆ. ಸಾವಿರಾರು ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿದ್ದಾರೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ದಂಪತಿ ಸಮೇತರಾಗಿ ಬಂದು ಆದ್ಯ ಫೌಂಡೇಶನ್ ಉದ್ಘಾಟಿಸಿ ಜನ ಮನ್ನಣೆಯನ್ನು ಪಡೆದ ಗಿರೀಶ್ ಅವರನ್ನ ಹರಸಿ ಆಶೀರ್ವದಿಸಿದರು.

ಹೆಣ್ಣು ಹುಟ್ಟೋದು ಪೂರ್ವ ಜನ್ಮದ ಪುಣ್ಯ

‘ಹೆಣ್ಣು ಮಗು ಹುಟ್ಟೋದು ಪೂರ್ವ ಜನ್ಮದ ಪುಣ್ಯ. ಹಾಗಾಗಿ, ನನ್ನ ಮಗಳ ಹೆಸರಲ್ಲಿ ಫೌಂಡೇಶನ್ ಆರಂಭಿಸಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುತ್ತಿದ್ದೇನೆ. ಸರ್ಕಾರಿ ಶಾಲೆ ಮಕ್ಕಳ ಮೊಗದಲ್ಲಿ ನಾವು ಏನನ್ನೋ ಕೊಟ್ಟಾಗ ನೋಡುವ ಆ ನಗು ಕೋಟಿ ಸಂಪಾದನೆ ಮಾಡಿದ್ರು ಸಿಗದು. ಈಗಾಗಲೇ ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಮೂರು ಸಾವಿರ ಮಕ್ಕಳಿಗೆ ಉಚಿತ ಕಲಿಕಾ ಸಾಮಾಗ್ರಿ ಇರುವ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ’ ಎಂದು ಗಿರೀಶ್ ಹೇಳಿದರು.

ಒಟ್ಟಾರೆ, ಹೆಣ್ಣು ಎಂದ ಕೂಡಲೇ ಮೂಗು ಮುರಿಯುವವರ ನಡುವೆ ಜನ ಸೇವೆಗಾಗಿ ಮಗಳ ಹುಟ್ಟು ಹಬ್ಬದ ದಿನದಂದೆ ತನ್ನ ಮಗಳ ಹೆಸರಲ್ಲೇ ಫೌಂಡೇಶನ್ ಆರಂಭಿಸಿ ಮಗಳ ಹೆಸರನ್ನ ಅಜರಾಮರವಾಗಿ ಉಳಿಸುವ ಕೆಲಸ ಮಾಡಿದ್ದಾರೆ. ಜೊತೆಗೆ, ತಮ್ಮ ಕೈಲಾದ ಸೇವೆಯನ್ನ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದು, ಗಿರೀಶ್ ಬಡವರ ಪಾಲಿನ ನಿಜವಾದ ಜನನಾಯಕರಾಗಿದ್ದಾರೆ.

  • ಹೇಮಂತ್ ಕುಮಾರ್ ಜೆ.ಎಸ್, ಪವರ್ ಟಿವಿ, ತುಮಕೂರು.

RELATED ARTICLES

Related Articles

TRENDING ARTICLES