Saturday, May 4, 2024

ಇವ್ರ ಸರ್ಕಾರ ಬರಲ್ಲ, ಮುಂದೆ ಇವ್ರು ಮಂತ್ರಿ ಆಗಲ್ಲ : ಈಶ್ವರಪ್ಪ ಭವಿಷ್ಯ

ಶಿವಮೊಗ್ಗ : ರಾಜ್ಯದಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. 139 ಜನ ಆತ್ಮಹತ್ಯೆ ಮಾಡಿಕೊಂಡಿರುವ ರೈತರಿಗೆ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಬೆಳೆ ಪರಿಹಾರ ಇಲ್ಲ. ಬರಗಾಲ ಘೋಷಣೆ ಮಾಡುತ್ತಿಲ್ಲ. ಈ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮಳೆ ಇಲ್ಲದೇ ಜನ ಸಾಯುತ್ತಿದ್ದರೂ ಸರ್ಕಾರ ಬರಗಾಲ ಘೋಷಣೆ ಮಾಡದೇ ಕಾಲ ಕಳೆಯುತ್ತಿದ್ದಾರೆ. ಬೆಳೆ ಪರಿಹಾರ ಘೋಷಣೆ ಮಾಡದೇ ನಾಳೆ ಬಾ ಎನ್ನುವಂತೆ ಮಾತನಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು‌ ಜನರ ಸಂಕಷ್ಟ ಕೇಳುತ್ತಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುತ್ತಿಲ್ಲ. ಮುಂದೆ ಇವರು ಯಾರು ಮಂತ್ರಿ ಆಗಲ್ಲ, ಇವರ ಸರ್ಕಾರ ಬರಲ್ಲ ಎಂದು ಭವಿಷ್ಯ ನುಡಿದರು.

ಬರ ಘೋಷಣೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಕಳೆದ ಎರಡು ತಿಂಗಳಿಂದ ಮೀನಾ-ಮೇಷ ಎಣಿಸುತ್ತಿದೆ. ಬರಪೀಡಿತ ತಾಲೂಕುಗಳ ಅಂಕಿ-ಅಂಶಗಳು ಸರ್ಕಾರದ ಬಳಿ ಇವೆ. ಕೂಡಲೇ ಪಟ್ಟಿ ಮಾಡಿ ಅವುಗಳನ್ನು ಬರಪೀಡಿತ ಪ್ರದೇ‍ಶಗಳು ಎಂದು ತಕ್ಷಣ ಸಾರುವ ಮೂಲಕ ರೈತರ ಸಂಕಷ್ಟ ನಿವಾರಣೆಗೆ ಧಾವಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮಳೆಯ ತೀವ್ರ ಅಭಾವದಿಂದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ನೆರವಿಗೆ ತುರ್ತಾಗಿ ಧಾವಿಸಬೇಕು ಎಂದು ಕೆ.ಎಸ್‌. ಈಶ್ವರಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

RELATED ARTICLES

Related Articles

TRENDING ARTICLES