Wednesday, January 22, 2025

ಕ್ಷುಲ್ಲಕ ಕಾರಣಕ್ಕೆ ಜಗಳ, ಯುವಕನ ಕೊಲೆಯಲ್ಲಿ ಅಂತ್ಯ

ಮಂಡ್ಯ : ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯೋಗೇಶ್ (32) ಕೊಲೆಯಾದ ದುರ್ದೈವಿ. ಪ್ರದೀಪ್ (31) ಹತ್ಯೆಗೈದ ಆರೋಪಿ. ಕೊಲೆಯಾದ ಯೋಗೇಶ್, ಆತನ ತಾಯಿ ಭಾಗ್ಯಮ್ಮ ಜೊತೆ ಪ್ರದೀಪ್ ಪದೇ ಪದೆ ಜಗಳ ಮಾಡುತ್ತಿದ್ದ.

ಮಂಗಳವಾರ ಸಂಜೆಯೂ ಇದೇ ರೀತಿ ಜಗಳ ಶುರುವಾಗಿದ್ದು, ಕೋಪ ವಿಕೋಪಕ್ಕೆ ತಿರುಗಿದೆ. ಕೋಪದ ಭರದಲ್ಲಿ ಪ್ರದೀಪ್ ತನ್ನ ಮನೆಯಲ್ಲಿದ್ದ ಚಾಕು ತಂದು ಯೋಗೇಶ್‌ಗೆ ಇರಿದಿದ್ದಾನೆ. ಚಾಕು ಇರಿತಕ್ಕೊಳಗಾದ ಯೋಗೇಶ್‌ನನ್ನು ತಕ್ಷಣವೇ ಸ್ಥಳಿಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾನೆ.

ಸದ್ಯ ಕೊಲೆಗೈದ ಆರೋಪಿ ಪ್ರದೀಪ್ ಪರಾರಿಯಾಗಿದ್ದು, ತಲೆಮರೆಸಿಕೊಂಡಿರುವ ಪ್ರದೀಪ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ಕುರಿತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES