ಬೆಳಗಾವಿ : ಪ್ರತಿಯೊಬ್ಬ ಮಗುವಿನ ಜೀವನ ರೂಪುಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಅತಿ ಪ್ರಮುಖ. ಇಲ್ಲೊಂದು ಶಿಕ್ಷಣ ವಂಚಿತ ಕುಗ್ರಾಮದಲ್ಲಿ ಶಾರದಾಂಬೆಯೇ ಬಂದು ನೆಲೆಸಿದ್ದಾಳೆ. ಇವತ್ತು ಈ ಗ್ರಾಮದಲ್ಲಿ 500ಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ಇದಕ್ಕೆ ಕಾರಣ ಆ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು ಸಿಗುತ್ತಾರೆ. ಈ ಗ್ರಾಮದ 500ಕ್ಕೂ ಹೆಚ್ಚು ಶಿಕ್ಷಕರು ರಾಜ್ಯದ ವಿವಿಧೆಡೆ ಅಕ್ಷರ ಕಲಿಸುತ್ತಾ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.
ಇಂಚಲ ಗ್ರಾಮ ಶಿಕ್ಷಕರ ತವರೂರಾಗಲು ಇಲ್ಲಿನ ಸಿದ್ಧಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಕಾರಣ. 1969ರಲ್ಲಿ ಅಂದಿನ ಸಿದ್ದರಾಮ ಶಿವಯೋಗಿಗಳು ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು.
1982ರಲ್ಲಿ ಪ.ಪೂ ಕಾಲೇಜು ಆರಂಭ
ಪಟ್ಟಕ್ಕೆ ಏರಿದ ಮಾರನೇ ವರ್ಷದಿಂದೇ ಗ್ರಾಮದಲ್ಲಿ ವೇದಾಂತ ಪರಿಷತ್ ಆಯೋಜಿಸಿದ್ದರು. ನಂತರ 1975ರಲ್ಲಿ ಶಿವಯೋಗಿಶ್ವರ ಪ್ರೌಢಶಾಲೆ, 1982ರಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು. ಹೀಗಾಗಿ, ಶಿಕ್ಷಣ ವಂಚಿತವಾಗಿದ್ದ ಕುಗ್ರಾಮದಲ್ಲಿ ಈ ಮನೆಗೊಬ್ಬರು ಶಿಕ್ಷಕರಿದ್ದಾರೆ.
ಇದನ್ನೂ ಓದಿ : ಮನುಷ್ಯ ಮನುಷ್ಯನನ್ನ ದ್ವೇಷಿಸಬಾರದು, ಪ್ರೀತಿಸಬೇಕು : ಸಿದ್ದರಾಮಯ್ಯ
50 ಜನ ಶಿಕ್ಷಕರಾಗಿ ನೇಮಕ
ಸಿದ್ದರಾಮ ಶಿವಯೋಗಿ ಶಿವಾನಂದ ಭಾರತಿ ಸ್ವಾಮಿಗಳು ಮಾಡಿದ ಶಿಕ್ಷಣ ಕ್ರಾಂತಿಯಿಂದ ಈ ಗ್ರಾಮ ಶಿಕ್ಷಕರ ತವರೂರಾಗಿ ಬದಲಾಗಿದೆ. 1988 ರಿಂದ ನಡೆದ ಶಿಕ್ಷಕರ ನೇಮಕಾತಿಯಲ್ಲಿ ಪ್ರತಿ ವರ್ಷ ಸರಾಸರಿ 20ಕ್ಕೂ ಹೆಚ್ಚು ಶಿಕ್ಷಕರು ಆಯ್ಕೆಯಾಗುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ 7 ಸಾವಿರ ಶಿಕ್ಷಕರ ಪೈಕಿ ಶೇ.99ರಷ್ಟು ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1997ರ ಬ್ಯಾಚ್ನಲ್ಲಿ ಕರಿಗಾರ ಮನೆತನದ ಏಳು ಮಂದಿ ನೇಮಕಾತಿಯಾಗಿದ್ದಾರೆ. ಆ ವರ್ಷ ಇಂಚಲ ಗ್ರಾಮದ 50 ಜನ ಶಿಕ್ಷಕರಾಗಿ ನೇಮಕವಾಗಿದ್ದು ದಾಖಲೆ ಪುಟ ಸೇರಿದೆ.
ಒಟ್ಟಾರೆ, ಇಂಚಲ ಗ್ರಾಮ ರಾಜ್ಯದಲ್ಲೇ ಮಾದರಿ ಗ್ರಾಮವಾಗಿದೆ. ಪ್ರತಿ ಮನೆಯಲ್ಲೂ ಶಿಕ್ಷಕರಿದ್ದಾರೆ. ಶಿಕ್ಷಣ ಕ್ರಾಂತಿ ಮಾಡಿ ಅಕ್ಷರ ದಾಸೋಹ ಮಾಡುತ್ತಿದ್ದಾರೆ. ಈ ಗ್ರಾಮ ಉಳಿದ ಗ್ರಾಮಗಳಿಗೂ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ.
- ಅಣ್ಣಪ್ಪ ಬಾರ್ಕಿ, ಪವರ್ ಟಿವಿ, ಬೆಳಗಾವಿ