ಬೆಂಗಳೂರು : ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಇಸ್ರೋ ತಂಡವನ್ನು ಅಭಿನಂದಿಸಲು ಶನಿವಾರ ಖುದ್ದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಬಿಜೆಪಿ ಸಿದ್ಧತೆ ಕೈಗೊಂಡಿದ್ದು, ಒಂದು ಕಿ.ಮೀ. ದೂರ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾದ್ಯಮ ಪ್ರತಿಕ್ರಿಯೆ ನಿಡಿದ ಅವರು, ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರಿಗೆ ಸ್ವಾಗತ ಕೋರುವ ವ್ಯವಸ್ಥೆ ಮಾಡುತ್ತಿದ್ದೇವೆ.
ಇದನ್ನು ಓದಿ: ಬುದ್ದಿ ಹೇಳಿದ ಉಪನ್ಯಾಸಕರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ ವಿದ್ಯಾರ್ಥಿ!
ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ಪ್ರಧಾನಿಗಳು ಭೇಟಿ ನೀಡಲಿದ್ದಾರೆ. ಒಂದು ಕಿ.ಮೀ.ನಷ್ಟು ದೂರ ರೋಡ್ ಶೋ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಮೋದಿ ಸ್ವಾಗತ ಮತ್ತು ರೋಡ್ ಶೋ ವೇಳೆ ರಾಷ್ಟ್ರಧ್ವಜ ಹಿಡಿದುಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೇ, ಪ್ರಧಾನಿ ಮತ್ತು ಇಸ್ರೋ ವಿಜ್ಞಾನಿಗಳಿಗೆ ಮಾತ್ರ ಘೋಷಣೆ ಹಾಕಲುಸೂಚಿಸಲಾಗಿದೆ. ರೋಡ್ ಶೋ ಮಾಡುವ ಉದ್ದೇಶದಿಂದ ಶಾಸಕ ಮುನಿರಾಜು ಜತೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಈ ವೇಳೆ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ , ಬೈರತಿ ಬಸವರಾಜ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇತರರು ಭಾಗಿಯಾಗಿದ್ದರು.