ಮೈಸೂರು : ಜೆಡಿಎಸ್ ಮೂರು ಹೋಳಾಗಲಿದೆ. 9 ಜನರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸ್ಫೋಟಕ ಹೇಳಿಕೆ ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿ ಕೊನೆಗೆ ಉಳಿದುಕೊಳ್ಳುವುದು ಕುಮಾರಸ್ವಾಮಿ ಒಬ್ಬರೇ ಎಂದು ಕುಟುಕಿದರು.
ನಾನು ಕೆಪಿಸಿಸಿ ವಕ್ತಾರನಾಗಿ ಹೇಳುತ್ತಿದ್ದೇನೆ. ಆದರೆ, ನಾವೇ ನಮಗೆ ಬೇಡ ಅಂತ ಇದ್ದೇವೆ. ಯಾವುದೇ ಕಂಡಿಷನ್ ಹಾಕದೇ ಬರಲು ಸಿದ್ದರಾಗಿದ್ದಾರೆ. ಈ ಬಗ್ಗೆ ನಮ್ಮ ಹೈಕಮಾಂಡ್ ನಿರ್ಧಾರ ಮಾಡಲಿದೆ. ನಮ್ಮ ನಾಯಕತ್ವ ಸಿದ್ದಾಂತ ಒಪ್ಪಿ ಬರುವುದಾದರೆ ಸ್ವಾಗತ ಎಂದು ಹೇಳಿದರು.
ಇದನ್ನೂ ಓದಿ : ನಿನ್ನೆ ನಡೆದ ಘಟನೆಗೆ ‘ಅಬೀಬಿ ಪಿಕ್ಚರ್ ಬಾಕಿ ಹೈ’ : ಸುರೇಶ್ ಕುಮಾರ್
ಬಿಜೆಪಿಯ ಬಿ ಟೀಂ ಅಂತ ಸ್ಪಷ್ಟ
ಜೆಡಿಎಸ್ ನವರು ಬಿಜೆಪಿಯ ಬಿ ಟೀಂ ಅಂತ ಹೇಳಿದ್ದೆವು. ಅದನ್ನು ಅವರೇ ಇದೀಗ ಸ್ಪಷ್ಟ ಪಡಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಮೂರು ಒಳಾಗಲಿದೆ. ಕೊನೆಗೆ ಜೆಡಿಎಸ್ ನಲ್ಲಿ ಒಬ್ಬರೇ ಉಳಿದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಕುಮಾರಸ್ವಾಮಿಗೆ ಕೌಂಟರ್ ಕೊಟ್ಟರು.
ಗೃಹಲಕ್ಷ್ಮೀ ಯೋಜನೆಯ ದಿಕ್ಕು ತಪ್ಪಿಸಲು ವಿರೋಧ ಪಕ್ಷಗಳು ಸಂಚು ರೂಪಿಸುತ್ತಿವೆಯೇ ಎಂಬ ಪ್ರಶ್ನೆಗೆ, ಯೋಜನೆಯ ಪ್ರಚಾರ ತಡೆಯಲು ಸದನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗದ್ದಲ ಉಂಟು ಮಾಡುತ್ತಿದೆ. ಗ್ಯಾರಂಟಿಯ ನಾಲ್ಕನೇ ಯೋಜನೆ ಪ್ರಾರಂಭವಾಗಿದೆ. ಒಂದು ಕೋಟಿ 60 ಲಕ್ಷ ಮಂದಿಗೆ ಇದು ತಲುಪಲಿದೆ. ಈ ಯೋಜನೆಯನ್ನು ದಿಕ್ಕು ತಪ್ಪಿಸಲು ಬಿಜೆಪಿ ಫ್ರೀ ಪ್ಲಾನ್ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.