ಮೈಸೂರು : ಓದಿದ್ದು 5ನೇ ಕ್ಲಾಸ್. ಹೇಳಿಕೊಂಡಿದ್ದು ವೈದ್ಯ, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಅಂತ. ಆಗಿದ್ದು ಬರೋಬ್ಬರಿ 15 ಮದುವೆ. ಇದೀಗ, ಪೊಲೀಸರ ಅತಿಥಿ.
ಹೌದು, 5ನೇ ತರಗತಿ ಓದಿ ತಾನು ವೈದ್ಯ, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದು ನಂಬಿಸಿ ಬರೋಬ್ಬರಿ 15 ಮದುವೆಯಾಗಿದ್ದ ಭೂಪನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಮಹೇಶ್ ಕೆ.ಬಿ ನಾಯಕ್ (35) ಬಂಧಿತ ಆರೋಪಿ. ಈತ ಬೆಂಗಳೂರಿನ ನಿವಾಸಿಯಾಗಿದ್ದಾನೆ.
ಆರೋಪಿ ಮಹೇಶ್ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ನಾನು ವೈದ್ಯ, ಇಂಜಿನಿಯರ್ ಅಂತ ಹೇಳಿಕೊಂಡು ಸಂಪರ್ಕ ಬೆಲೆಸಿಕೊಂಡು ಬಲೆಗೆ ಬೀಳಿಸುತ್ತಿದ್ದನು. ಅವಿವಾಹಿತ ಮಹಿಳೆಯರು, ವಿಚ್ಛೇದನ ಪಡೆದವರನ್ನು ಟಾರ್ಗೆಟ್ ಮಾಡುತ್ತಿದ್ದನು. ಕಳೆದ 10 ವರ್ಷಗಳಲ್ಲಿ 15 ಮದುವೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಿಯತಮೆಯ ಕೊಂದು ಎಸ್ಕೇಪ್ ಆಗಿದ್ದ ಪ್ರೇಮಿಯ ಬಂಧನ
ತುಮಕೂರಿನಲ್ಲಿ ನಕಲಿ ಕ್ಲಿನಿಕ್
ಮಹೇಶ್ ಓದಿರುವುದು 5ನೇ ತರಗತಿ. ಆದರೆ, ತಾನು ವೈದ್ಯ, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು ಮಹಿಳೆಯರನ್ನು ಮದುವೆಯಾಗಿದ್ದಾನೆ. ವೈದ್ಯ ಅಂತ ನಂಬಿಸಲು ತುಮಕೂರಿನಲ್ಲಿ ನಕಲಿ ಕ್ಲಿನಿಕ್ ಸ್ಥಾಪಿಸಿದ್ದನು ಎಂದು ತಿಳಿದುಬಂದಿದೆ.
ಆರೋಪಿ ಬಣ್ಣ ಬಯಲಾಗಿದ್ದು ಹೇಗೆ?
ಇತ್ತೀಚೆಗಷ್ಟೇ ಸಾಫ್ಟ್‌ವೇರ್ ಇಂಜಿನಿಯರ್ ಅನ್ನು ಮದುವೆಯಾಗಿದ್ದನು. ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿದ ಕೂಡಲೇ ಕುವೆಂಪು ನಗರ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಹೇಶ್ ಬಳಿ ಇದ್ದ 2 ಲಕ್ಷ ರೂ. ನಗದು, ಎರಡು ಕಾರುಗಳು, ಚಿನ್ನಾಭರಣಗಳು ಹಾಗೂ 7 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಬೇರೆ ಬೇರೆ ಮಹಿಳೆಯರೊಂದಿಗೆ ನಾಲ್ವರು ಮಕ್ಕಳನ್ನು ಹೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.