Thursday, May 16, 2024

ಕಣ್ಮನ ಸೆಳೆಯುತ್ತಿದೆ ‘ತುಂಗೆ’ಯ ದೃಶ್ಯ ವೈಭವ : ಮಲೆನಾಡು ರೈತರ ಮೊಗದಲ್ಲಿ ಹರ್ಷ

ಶಿವಮೊಗ್ಗ : ಕಳೆದೊಂದು ವಾರದಿಂದ ನಿರಂತರ ವರ್ಷಧಾರೆ. ಮಲೆನಾಡು ರೈತರ ಮೊಗದಲ್ಲಿ ಸಂತಸ. ಜಿಟಿಜಿಟಿ ಮಳೆಗೆ ಮೈದುಂಬಿದ ನದಿಗಳು.

ಈ ದೃಶ್ಯ ಕಂಡು ಬಂದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ನಿರಂತರ ವರ್ಷಧಾರೆಯಿಂದ ಮಲೆನಾಡು ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಜೂನ್, ಜುಲೈ ತಿಂಗಳಲ್ಲಿ ವಾಡಿಕೆ ಮಳೆಯಾಗದೇ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮಳೆಯ ಕೊರತೆ ಎದುರಾಗಿತ್ತು. ರೈತರು ಮಳೆ ಇಲ್ಲದೇ ಭತ್ತದ ನಾಟಿ ಮಾಡುವುದು ಹೇಗೆ ಎಂಬ ಪರಿಸ್ಥಿತಿ ಇತ್ತು. ಆದರೆ, ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಜಿಲ್ಲೆಯ ನದಿಗಳು ಮೈದುಂಬಿ ಹರಿಯಲು ಆರಂಭಿಸಿವೆ. ಶಿವಮೊಗ್ಗ ತಾಲ್ಲೂಕಿನ ಜೀವನಾಡಿ ತುಂಗೆಯೂ ತುಂಬಿದ್ದಾಳೆ.

ಪ್ರಪ್ರಥಮವಾಗಿ ತುಂಬಿದ ಆಣೆಕಟ್ಟು

ಜಲಾಶಯಗಳಿಗೆ ಭಾರೀ ಪ್ರಮಾಣ ಒಳ ಹರಿವು ಬರುತ್ತಿದೆ. ಜಲಾಶಯಗಳಲ್ಲಿನ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ. ಶಿವಮೊಗ್ಗ ತಾಲ್ಲೂಕಿನ ಜೀವನಾಡಿಯಾಗಿರುವ ತುಂಗಾ ಜಲಾಶಯ ಭರ್ತಿಯಾಗಿದ್ದು, ರಾಜ್ಯದಲ್ಲಿಯೇ ಪ್ರಪ್ರಥಮ ಆಣೆಕಟ್ಟು ತುಂಬಿ ಹರಿಯುತ್ತಿದೆ. 3.24 ಟಿಎಂಸಿ ನೀರು ಸಂಗ್ರಹಣೆಯ ಸಾಮರ್ಥವಿರುವ ತುಂಗಾ ಅಣೆಕಟ್ಟೆಯಲ್ಲಿ ಸಂಪೂರ್ಣ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ

588 ಮೀ. ನಷ್ಟು ನೀರು ಸಂಗ್ರಹ

ತುಂಗಾ ಅಣೆಕಟ್ಟು 588.24 ಮೀ. ಇದ್ದು ಇದರಲ್ಲಿ 588 ಮೀ. ನಷ್ಟು ನೀರು ಸಂಗ್ರಹವಾಗಿದೆ. ಅಪಾರ ಪ್ರಮಾಣದ ಒಳ ಹರಿವು ಇರುವುದರಿಂದ ಹೊರ ಹರಿವು ಹೆಚ್ಚಿಸಲಾಗಿದೆ. ಅಣೆಕಟ್ಟಿಗೆ 12 ಸಾವಿರ  ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ನದಿಗೆ 12 ಸಾವಿರ ಕ್ಯೂಸೆಕ್ ಹರಿ ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಒಟ್ಟಾರೆ, ತುಂಗೆ ಮೈದುಂಬಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆ ಪ್ರಮಾಣ ಹೆಚ್ಚಾದಲ್ಲಿ ಡ್ಯಾಂಗೆ ಒಳಹರಿವು ಹೆಚ್ಚಾಗಲಿದ್ದು, ಜಲಾಶಯ ಮತ್ತಷ್ಟು ಕ್ರೆಸ್ಟ್​ ಗೇಟ್​ಗಳ ಮೂಲಕ ನೀರು ಹೊರಬಿಡುವ ಸಾಧ್ಯತೆಗಳಿವೆ. ಒಟ್ನಲ್ಲಿ, ಶಿವಮೊಗ್ಗ ಜನರ ಜೀವನಾಡಿಯಾಗಿರುವ ತುಂಗೆ ಈಗ ಮೈದುಂಬಿ ಹರಿಯುತ್ತಿರುವುದು ಹರ್ಷದಾಯಕವಾಗಿದೆ.

RELATED ARTICLES

Related Articles

TRENDING ARTICLES