Sunday, May 19, 2024

SCSP/TSP ಅನುದಾನ ದುರ್ಬಳಕೆಯಾಗದಂತೆ ಕಾಯ್ದೆ ಸೆಕ್ಷನ್‌ 7(ಡಿ) ಕೈಬಿಡಲಾಗುವುದು:ಸಿದ್ದರಾಮಯ್ಯ

ಬೆಂಗಳೂರು: ಇಂದು ಮಂಡನೆಯಾಗುತ್ತಿರುವ ರಾಜ್ಯ ಬಜೆಟ್ ನಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿ ಕೆ.ಎಸ್​ ನಿಸಾರ್​ ಅಹ್ಮದ್ ರವರ  ʻಭೇದ ಭಾವ ನೀಗಬೇಕು, ದುಡಿದು ಹಿರಿಮೆಗಳಿಸಬೇಕು ಭಾರತೀಯರೆನಿಸುವೆಲ್ಲ ಜಾತಿ ಮತದ ಮಕ್ಕಳುʼ ಸಾಲುಗಳನ್ನು ಉಲ್ಲೇಖಿಸಿ ಮುಂದುವರೆಸಿದರು.

ಸಮಾಜದಲ್ಲಿ ಹಲವು ಪೀಳಿಗೆಗಳಿಂದ ತುಳಿತಕ್ಕೊಳಗಾದ, ಅವಕಾಶ ವಂಚಿತರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಅಭ್ಯುದಯಕ್ಕೆ ನಮ್ಮ ಸರ್ಕಾರದ ಬದ್ಧತೆ ಪ್ರಶ್ನಾತೀತ. ಕರ್ನಾಟಕ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಗಳಿಗೆ

ಈ ಹಿಂದೆ, ಅಂದರೆ, 2012-13ನೇ ಸಾಲಿನಲ್ಲಿ ಹಾಗೂ ಅದಕ್ಕೂ ಹಿಂದಿನ ಸಾಲುಗಳಲ್ಲಿ ವೈಜ್ಞಾನಿಕವಾಗಿ ಅನುದಾನ ಹಂಚಿಕೆಯಾಗುತ್ತಿರಲಿಲ್ಲ.  ಈ ನ್ಯೂನತೆಯನ್ನು ಸರಿಪಡಿಸುವ ಸಲುವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಜನಸಂಖ್ಯೆಯನ್ನಾಧರಿಸಿ, ಅವರ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡುವ ಹಾಗೂ ನಿರ್ದಿಷ್ಟ ಉದ್ದೇಶಗಳಿಗೇ ಅನುದಾನ ಬಳಕೆಯಾಗುವ ಕುರಿತು ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ ಅಧಿನಿಯಮ, 2013ನ್ನು (SCSP/TSP Act, 2013) ಜಾರಿಗೆ ತಂದ ಶ್ರೇಯ ನಮ್ಮ ಸರ್ಕಾರದ್ದಾಗಿದೆ.

ಈ ಯೋಜನೆಯ ಅನುದಾನ ಹಂಚಿಕೆಯಲ್ಲಿ ವ್ಯಾಪಕ ಬದಲಾವಣೆಯಾಗಿದ್ದು, 2013-14ರಲ್ಲಿ 8,988 ಕೋಟಿ ರೂ. ಇದ್ದ ಹಂಚಿಕೆ, 2014-15 ರಲ್ಲಿ 13,043 ಕೋಟಿ ರೂ. ಗಳಿಗೆ ಏರಿಕೆಯಾಗಿರುತ್ತದೆ.  ನಂತರದ ಸಾಲುಗಳಲ್ಲಿ ಅಂದರೆ, 2015-16 ರಿಂದ 2022-23ರ ವರೆಗಿನ ಸಾಲುಗಳಲ್ಲಿ ಈ ಯೋಜನೆಯಡಿ ಆಯವ್ಯಯದ ಶೇ. 24.1ರಷ್ಟು ಅನುದಾನ ಈ ಸಮುದಾಯಕ್ಕೆ ಕಡ್ಡಾಯವಾಗಿ ದೊರಕಿಸಿಕೊಟ್ಟಂತಾಗಿದೆ. ಆದಾಗ್ಯೂ, ಹಿಂದಿನ ಸರ್ಕಾರದ ಅವಧಿಯಲ್ಲಿ ಒಟ್ಟಾರೆ ಅನುದಾನ ಹಂಚಿಕೆಯು ನಿರಾಶಾದಾಯಕವಾಗಿತ್ತು. 2023ರ ಫೆಬ್ರವರಿ ತಿಂಗಳಿನಲ್ಲಿ ಹಿಂದಿನ ಸರ್ಕಾರ ಮಂಡಿಸಿದ್ದ ಆಯವ್ಯಯದಲ್ಲಿ SCSP/TSP ಯೋಜನೆಗೆ ಹಂಚಿಕೆ ಮಾಡಿದ್ದ 30,21೫ ಕೋಟಿ ರೂ. ಅನುದಾನವನ್ನು, ನಾನು ಈ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ

24,333 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ 9,960 ಕೋಟಿ ರೂ. ಸೇರಿದಂತೆ ಒಟ್ಟಾರೆ 34,294 ಕೋಟಿ ರೂ.ಗಳಿಗೆ ಹೆಚ್ಚಿಸಿ, 4,079 ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ಒದಗಿಸಿರುತ್ತೇನೆ. ಇದು ಈ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನಮ್ಮ ಸರ್ಕಾರವು ನೀಡುವ ಆದ್ಯತೆಗೆ ಸ್ಪಷ್ಟ ನಿದರ್ಶನವಾಗಿದೆ.

SCSP/TSP ಅಧಿನಿಯಮ, 2013ರಡಿ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳ ಒಳಿತಿಗೇ ಬಳಕೆಯಾಗಬೇಕೆನ್ನುವುದು ನಮ್ಮ ಸರ್ಕಾರದ ಆಶಯವಾಗಿದೆ.

ಈ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಮತ್ತು ಚಿಂತಕರ ಬಹುದಿನಗಳ ಒತ್ತಾಯದನ್ವಯ ಕಾಯ್ದೆಯ ಸೆಕ್ಷನ್‌ 7(ಡಿ) ಅನ್ನು ಕೈಬಿಡಲಾಗುವುದು.

RELATED ARTICLES

Related Articles

TRENDING ARTICLES