ಕೊಪ್ಪಳ : ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅನ್ನೋದೆ ಗೊತ್ತಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಟಕ್ಕರ್ ಕೊಟ್ಟಿದ್ದಾರೆ.
ಕೊಪ್ಪಳದ ಕಾರಟಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಿಗೆ ಜಿಲ್ಲೆ ಎಷ್ಟಿದೆ ಅಂತ ಗೊತ್ತಿಲ್ಲ. ಅಂತವರು ಕಾಂಗ್ರೆಸ್ ಗೆ ಬುದ್ದಿ ಹೇಳುವ ನೈತಿಕತೆ ಇದೆಯೇ? ಎಂದು ಕುಟುಕಿದ್ದಾರೆ.
ಬಿಜೆಪಿಯವರಿಗೆ ಬುದ್ದಿ ಭ್ರಮಣೆ ಆಗಿದೆ. ಗ್ಯಾರಂಟಿ ಯೋಜನೆಯಿಂದ ಬಿಜೆಪಿ ಸೋತಿದೆ. ನಳಿನ್ ಕುಮಾರ್ ಕಟೀಲ್‌ಗೆ ಬುದ್ದಿ ಭ್ರಮಣೆ ಆಗಿದೆ. 15 ಕಿಲೋ ಅಕ್ಕಿ ಯಾರು ಕೊಡಬೇಕು ಅಂತಾರೆ. ಅವರಿಗೆಲ್ಲ ಬುದ್ದಿ ಭ್ರಮಣೆ ಆಗಿದೆ ಎಂದು ಛೇಡಿಸಿದ್ದಾರೆ.
ಇದನ್ನೂ ಓದಿ : ಊಟ ಮಾಡಿ ಬಂದು ಸತ್ಯಾಗ್ರಹ ಧರಣಿ ಮಾಡೋಣ : ಬಿ.ಎಸ್ ಯಡಿಯೂರಪ್ಪ
ಬಿಜೆಪಿ ಮನೆಗೆ ಕಳುಹಿಸುತ್ತೇವೆ
10 ಕಿಲೋ ಅಕ್ಕಿ ಕೊಡಲು ಕೇಂದ್ರ ನಿರಾಕರಣೆ ವಿಚಾರ ಕುರಿತು ಮಾತನಾಡಿ, ರಾಜ್ಯದ ಬಡವರ ಬಗ್ಗೆ ಬಿಜೆಪಿ ಪಕ್ಷಕ್ಕೆ ಕಾಳಜಿ ಇಲ್ಲ. ಬಿಜೆಪಿಗೆ ಬೇಕಾಗಿರೋದು ಕಾರ್ಪೊರೇಟರ್ಗಳು. ಅಕ್ಕಿ ಕೇಂದ್ರ ಸರ್ಕಾರದ ಸ್ವಂತ ಆಸ್ತಿ ಅಲ್ಲ. ಕೇಂದ್ರ ಸರ್ಕಾರಕ್ಕೆ ನಾವು ತೆರಿಗೆ ಕಟ್ಟುತ್ತೇವೆ. ನಮ್ಮ ಪಾಲು ನಾವು ಕೇಳ್ತಾ ಇದ್ದೇವೆ. ನಾವೇನು ಫ್ರೀ ಕೇಳ್ತಾ ಇಲ್ಲ. 10 ಕಿಲೋ ಅಕ್ಕಿ ಕೊಡ್ತಿವಿ. 5 ಉಚಿತ ಗ್ಯಾರಂಟಿ ಈಡೇರಿಸುತ್ತೇವೆ. ಬಿಜೆಪಿಯನ್ನು ಮನೆಗೆ ಕಳುಹಿಸುತ್ತೇವೆ ಎಂದು ಗುಡುಗಿದ್ದಾರೆ.
ಮೋದಿ ಮನೆಯಿಂದ ಅಕ್ಕಿ ಕೊಡ್ತಿಲ್ಲ
ಪ್ರಧಾನಿ ಮೋದಿ, ನಳಿನ್ ಕುಮಾರ್ ಕಟೀಲ್ ತಮ್ಮ ಮನೆಯಿಂದ ಅಕ್ಕಿ ಕೊಡ್ತಾ ಇಲ್ಲ. ಬಡವರು ನೆಮ್ಮದಿ ಜೀವನ ಮಾಡಲಿ ಅಂತ 10 ಕಿಲೋ ಅಕ್ಕಿ ಕೊಡ್ತಾ ಇಲ್ಲ. ಬಿಜೆಪಿಯವರು ರಾಜಕಾರಣ ಮಾಡ್ತಾ ಇದ್ದಾರೆ. ಬೇರೆ ರಾಜ್ಯದಿಂದ ಅಕ್ಕಿ ತಂದಾದರೂ ಜನರಿಗೆ ಕೊಡ್ತೀವಿ. ನಮ್ಮ ಮುಖ್ಯಮಂತ್ರಿಗಳು ಬಿಜೆಪಿಯವರಿಗಿಂತ ಬುದ್ದಿವಂತರಿದ್ದಾರೆ. ಸಿದ್ದರಾಮಯ್ಯನರಿಗೆ ಆಡಳಿತ ಹೇಗೆ ಮಾಡಬೇಕನ್ನುವುದು ಗೊತ್ತು ಎಂದು ಚಾಟಿ ಬೀಸಿದ್ದಾರೆ.