Friday, May 17, 2024

ಸಿಇಟಿ ವಿದ್ಯಾರ್ಥಿಗಳಿಗೆ ನಾಳೆ ಬೇಗ ಬನ್ನಿ.. ಇಲ್ಲದಿದ್ರೆ ‘ಟ್ರಾಫಿಕ್ ಜಾಮ್ ಪಕ್ಕಾ..!’

ಬೆಂಗಳೂರು : ನಾಳೆ ಕರ್ನಾಟಕದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಗೆ ಸಜ್ಜಾಗಿರುವ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ.

ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಸುತ್ತಮುತ್ತಲಿನ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು 2 ಗಂಟೆ ಮುಮಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಸೂಚಿಸಲಾಗಿದೆ.

ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ, ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಸಮೀಪದಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವವರು ಬೆಳಗ್ಗೆ 8.30ರ ಹೊತ್ತಿಗೆ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಭಾರೀ ಸಂಚಾರ ದಟ್ಟಣೆ ಸಾಧ್ಯತೆ

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಧ್ಯಾಹ್ನ ನಡೆಯಲಿರುವ ಗಣಿತದ ಪರೀಕ್ಷೆ ಮಾತ್ರ ಬರೆಯುತ್ತಿರುವವರು ಸಹ ಪರೀಕ್ಷಾ ಕೇಂದ್ರಗಳನ್ನು ಬೆಳಿಗ್ಗೆಯೇ ತಲುಪುವುದು ಒಳ್ಳೆಯದು. ಏಕೆಂದರೆ, ಪ್ರಮಾಣವಚನ ಸಮಾರಂಭದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ ಎಂದಿದ್ದಾರೆ.

ಇದನ್ನೂ ಓದಿ : ಸಿದ್ದು-ಡಿಕೆಶಿ ಪ್ರಮಾಣವಚನ ಸಮಾರಂಭಕ್ಕೆ ವರುಣನ ಕಾಟ?

ಪೊಲೀಸರ ಸಹಾಯ ಪಡೆಯಲು ಅವಕಾಶ

ಒಂದು ವೇಳೆ ಅಭ್ಯರ್ಥಿಗಳು ಸಂಚಾರ ದಟ್ಟಣೆಗೆ ಸಿಲುಕಿಕೊಂಡಲ್ಲಿ ಪರೀಕ್ಷಾ ಪ್ರವೇಶಪತ್ರವನ್ನು ಪೊಲೀಸರಿಗೆ ತೋರಿಸಿದರೆ ಅಂತಹವರನ್ನು ಆದಷ್ಟು ಬೇಗ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಉಪಾಹಾರ, ಊಟದ ವ್ಯವಸ್ಥೆ

ಜೊತೆಗೆ, ವಿಠಲ ಮಲ್ಯ ರಸ್ತೆಯಲ್ಲಿನ ಸೆಂಟ್ ಜೋಸೆಫ್ಸ್ ಇಂಡಿಯನ್ ಪಿಯು ಕಾಲೇಜು ಕಂಠೀರವ ಕ್ರೀಡಾಂಗಣಕ್ಕೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ, ಈ ಕೇಂದ್ರದಲ್ಲಿ ಸಿಇಟಿ ಬರೆಯುತ್ತಿರುವವರಿಗೆ ಮಾತ್ರ ಬೆಳಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES