ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಯಾರಾಗ್ತಾರೆ ಎಂಬುದು ಈಗ ಕೋಟಿ ರೂಪಾಯಿಯ ಪ್ರಶ್ನೆ. ಇದರ ಬಿಸಿ ಕಾಂಗ್ರೆಸ್ ಹೈಕಮಾಂಡ್ ಗೂ ತಟ್ಟಿದೆ.
ಹೌದು, ಸಿಎಂ ಪಟ್ಟಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನದೇ ಆದ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರಿಗೆ ಕೈ ವರಿಷ್ಠರು ಮಣೆ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿದ್ದುಗೆ ಮಣೆ ಹಾಕುವ ಸಾಧ್ಯತೆ ನಿಶ್ಚಳವಾಗಿದೆ. ಆದರೆ, ‘ಟ್ರಬಲ್ ಶೂಟರ್ ಟಕ್ಕರ್’ ವರಿಷ್ಠರ ನಿರ್ಧಾರಕ್ಕೆ ಯೆಸ್ ಅಂತಾರಾ? ಅಥವಾ ಒಲ್ಲೆ ಎಂದು ಬಂಡೆದ್ದು ಆರ್ಭಟಿಸುತ್ತಾರಾ? ಅನ್ನೋದು ಯಕ್ಷ ಪ್ರಶ್ನೆ.
ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಬೇಕು ಎಂದು ಹೇಳುತ್ತಿರುವ ಡಿಕೆಶಿ ಅದರಂತೆ ವರಿಷ್ಠರ ನಿರ್ಧಾರಕ್ಕೆ ಮನ್ನಣೆ ಕೊಡುತ್ತಾರಾ? ಇಲ್ಲವೇ, ಒಂದು ವೇಳೆ ಸಿಎಂ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದು ಬಂಡಾಯ ಎಳುತ್ತಾರಾ? ಅನ್ನೋ ಗೊಂದಲ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಆಯ್ಕೆ ಒಪ್ಪಿ ಕರ್ಣನಂತೆ ದಾನವೀರ ಶೂರ ಎನಿಸಿಕೊಳ್ಳಬಹುದು. ಪಟ್ಟಕ್ಕೆ ಪಟ್ಟು ಹಿಡಿದರೆ ದುರ್ಯೋಧನನ ಅವತಾರ ತಾಳಬಹುದು. ಇದು ಡಿಕೆಶಿ ನಿರ್ಧಾರದ ಮೇಲೆ ನಿಂತಿದೆ.
ಧರ್ಮರಾಯರಂತೆ ತಾಳ್ಮೆ ಇರಬೇಕು
ಸಿಎಂ ಸ್ಥಾನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆಶಿ, ಧರ್ಮರಾಯ, ಕರ್ಣ, ಅರ್ಜುನ, ಭೀಮ, ವಿದುರನ ವ್ಯಕ್ತಿತ್ವವನ್ನು ಉಲ್ಲೇಖಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ತಾವೂ ಯಾವುದೇ ಅವತಾರ ಬೇಕಾದರೂ ತಾಳಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಸಿಎಂ ಸ್ಥಾನಕ್ಕಾಗಿ ಡಿಕೆಶಿ ದುರ್ಯೋಧನನ ಅವತಾರ ತಾಳಿದ್ರೆ ಕಾಂಗ್ರೆಸ್ ಕನಸು ನುಚ್ಚು ನೂರಾಗುತ್ತದೆ.
ಇದನ್ನೂ ಓದಿ : ಮಲ್ಲಿಕಾರ್ಜುನ್ ಖರ್ಗೆಗೆ ಒಲಿಯಲಿದೆಯಾ ಸಿಎಂ ಪಟ್ಟ..?
ಡಿಕೆಶಿ ಮಾರ್ಮಿಕವಾಗಿ ಹೇಳಿದ್ದೇನು?
ಹೋರಾಟದಲ್ಲಿ ಯಶಸ್ಸು ಸಿಗಬೇಕಾದರೆ ತಾಳ್ಮೆ ಇರಬೇಕು. ಧರ್ಮರಾಯರಂತೆ ತಾಳ್ಮೆ ಇರಬೇಕು. ಜೊತೆಗೆ, ದಾನವೀರ ಶೂರ ಕರ್ಣನಂತಿರಬೇಕು. ಅರ್ಜುನನ ಗುರಿ ಇರಬೇಕು. ಭೀಮನ ಬಲವಿರಬೇಕು. ಕೃಷ್ಣನ ತಂತ್ರ, ವಿದುರನ ನೀತಿ ಇರಬೇಕು ಎಂದು ಹೇಳಿದ್ದಾರೆ. ಆ ಮೂಲಕ ಕಾಂಗ್ರೆಸ್ ವರಿಷ್ಠರ ನಿರ್ಧಾರ ಬರುವ ತನಕ ತಾವು ಮಹಾಭಾರತದಲ್ಲಿ ಬರುವ ಪಾತ್ರಗಳ ಗುಣಗಳನ್ನು ಪ್ರದರ್ಶಿಸುವುದಾಗಿ ಸೂಚನೆ ಕೊಟ್ಟಿದ್ದಾರೆ.
ಮಹಾಭಾರತದ ಪಾತ್ರಗಳ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ಯಶಸ್ಸು ಗಳಿಸುವ ತಂತ್ರ ತಮ್ಮಲ್ಲಿದೆ ಎಂದು ಹೇಳಿದ್ದಾರೆ. ಎಲ್ಲಾ ಪಾತ್ರ ಉಲ್ಲೇಖಿಸಿರುವ ಡಿಕೆಶಿ ಮಹಾಭಾರತದಲ್ಲಿ ಬರುವ ಮತ್ತೊಂದು ಪ್ರಮುಖ ಪಾತ್ರವಾದ ದುರ್ಯೋಧನ ಪಾತ್ರದ ಬಗ್ಗೆ ಇಲ್ಲಿ ಉಲ್ಲೇಖ ಮಾಡಿಲ್ಲ. ಡಿಕೆಶಿ ಲೆಕ್ಕಾಚಾರ ಉಲ್ಟಾ ಆದರೆ, ಕಾಂಗ್ರೆಸ್ ಹೈಕಮಾಂಡ್ ಗೆ ದುರ್ಯೋಧನನ ಅವತಾರ ಪ್ರದರ್ಶನವಾಗುವುದು ಪಕ್ಕಾ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.