ಹಾವೇರಿ : ಲಿಂಗಾಯತ ಹಾಗೂ ಹಿಂದುಳಿದ ವರ್ಗದ ಜನರು ಸಿಟ್ಟಿನಲ್ಲಿ ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಹಾವೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ತುಷ್ಟೀಕರಣದಿಂದ ಕರ್ನಾಟಕ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುಳ್ಳು ಗ್ಯಾರಂಟಿ ಘೋಷಣೆ
ಹಿಮಾಚಲ ಪ್ರದೇಶದಲ್ಲಿ ಸುಳ್ಳು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದರು. ಆದರೆ, ಸರ್ಕಾರ ರಚಿಸಿದ ಮೇಲೆ ಯಾವುದೇ ಘೋಷಣೆ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷದ ಸುಳ್ಳು ಗ್ಯಾರಂಟಿಗಳ ಇತಿಹಾಸವನ್ನು ಒಮ್ಮೆ ನೋಡಿ ಎಂದು ಕೈ ವಿರುದ್ಧ ಪ್ರಧಾನಿ ಮೋದಿ ಗುಡುಗಿದರು.
ಬಡವರ ಕಲ್ಯಾಣ ಬಿಜೆಪಿ ಮೊದಲ ಆದ್ಯತೆ
50 ವರ್ಷಗಳ ಹಿಂದೆ ಗರೀಬಿ ಹಠಾವೋ ಮಾಡೋದಾಗಿ ಹೇಳಿದ್ದರು. 50 ವರ್ಷಗಳಿಂದ ಬಡವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಡವರಿಗೆ ಉಚಿತ ರೇಷನ್, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಪಿಎಂ ಆವಾಸ್ ಯೋಜನೆ ಮೂಲಕ ಬಡವರಿಗೆ ಮನೆ ಕೊಟ್ಟಿದ್ದೇವೆ. ಬಡವರ ಕಲ್ಯಾಣ ಮತ್ತು ಸಶಕ್ತೀಕರಗೊಳಿಸುವುದು ಬಿಜೆಪಿ ಮೊದಲ ಆದ್ಯತೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ : ಮೋದಿ ರೋಡ್ ಶೋನಿಂದ ಬಿಜೆಪಿಗೆ ಹೊಸ ಚೈತನ್ಯ : ಸಚಿವ ಅಶ್ವತ್ಥನಾರಾಯಣ
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಶ್ವದಲ್ಲಿ ಆರ್ಥಿಕತೆಯಲ್ಲಿ ಭಾರತ 5ನೇ ಸ್ಥಾನಕ್ಕೆ ತಂದಿದ್ದೇವೆ. ದೇಶದಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ ಅಂತಾ ಜನರು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಬ್ಯಾನ್ ಮಾಡೋಕೆ ತಾಕತ್ತು ಇದೆಯಾ?
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಪಿಎಫ್‌ಐ, ಎಸ್‌ಡಿಪಿಐ ಒತ್ತಾಯಕ್ಕೆ ಮಣಿದು ಬಜರಂಗದಳ ಬ್ಯಾನ್ ಮಾಡಲು ಹೊರಟಿದೆ. ಬಜರಂಗದಳ ಬ್ಯಾನ್ ಮಾಡೋಕೆ ಯಾರಿಗಾದ್ರೂ ತಾಕತ್ತು ಇದೆಯಾ? ಎಂದು ಸವಾಲ್ ಹಾಕಿದರು.