Saturday, May 11, 2024

‘ಜೈ ಹನುಮ, ಕಾಂಗ್ರೆಸ್ ನಿರ್ನಾಮ’ ಘೋಷಣೆ ಮೊಳಗಿಸುತ್ತೇವೆ : ಸಚಿವ ಅಶ್ವತ್ಥನಾರಾಯಣ

ಬೆಂಗಳೂರು : ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಮಾತುಗಳನ್ನಾಡಿದೆ. ಈ ಮೂಲಕ ಅದು ಬಹುಜನರ ಭಾವನೆಗಳಿಗೆ ಘಾಸಿ ಉಂಟುಮಾಡಿದೆ ಎಂದು ಸಚಿವ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.

ಮಲ್ಲೇಶ್ವರ ಕ್ಷೇತ್ರದ ಬಡಾವಣೆಯ 4ನೇ ಮುಖ್ಯರಸ್ತೆಯ 13ನೇ ಅಡ್ಡರಸ್ತೆಯಲ್ಲಿರುವ ಅಲಮೇಲು ಅಪಾರ್ಟ್ಮೆಂಟ್‌ನಲ್ಲಿನ ನಿವಾಸಿಗಳನ್ನು ಭೇಟಿ ಮಾಡಿ, ಈ ಬಾರಿ ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ ಅವರು, ಕಾಂಗ್ರೆಸ್ ಈ ತಪ್ಪನ್ನು ಸರಿಪಡಿಸಿಕೊಂಡು, ಜನರ ಕ್ಷಮೆ ಕೋರಬೇಕು. ಇಲ್ಲದೆ ಹೋದರೆ, ‘ಜೈ ಹನುಮ, ಕಾಂಗ್ರೆಸ್ ನಿರ್ನಾಮ’ ಎನ್ನುವ ಘೋಷಣೆಗಳನ್ನು ಮೊಳಗಿಸುವ ಮೂಲಕ ಆ ಪಕ್ಷವನ್ನೇ ಕಿತ್ತೆಸೆಯುವ ಆಂದೋಲನ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಕಾಂಗ್ರೆಸ್ ಪಕ್ಷ ಕಸದ ಬುಟ್ಟಿ ಸೇರುತ್ತದೆ

ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ಎಲ್ಲ ದೇವಸ್ಥಾನಗಳಲ್ಲೂ ಹನುಮಾನ್ ಚಾಲೀಸಾ ಪಠಣ ನಡೆಸಲಾಗಿದೆ. ಕಾಂಗ್ರೆಸ್ ಸದ್ಯಕ್ಕೆ ಕುಟುಕು ಜೀವ ಉಳಿಸಿಕೊಂಡಿದೆ. ಬಹುಸಂಖ್ಯಾತರು ರೊಚ್ಚಿಗೆದ್ದರೆ ಆ ಪಕ್ಷ ಕಸದ ಬುಟ್ಟಿ ಸೇರುತ್ತದಷ್ಟೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ‘ಭವ್ಯ ರಾಮನಗರ’ ನಿರ್ಮಾಣಕ್ಕೆ ಡಬಲ್ ಇಂಜಿನ್ ಸರ್ಕಾರ ಬದ್ಧ : ಸಚಿವ ಅಶ್ವತ್ಥನಾರಾಯಣ

ಮಲ್ಲೇಶ್ವರಂನಲ್ಲೂ ಮೋದಿ ರೋಡ್‌ಶೋ

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಬೆಂಗಳೂರಿನ 17 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 36 ಕಿ.ಮೀ. ದಾಖಲೆಯ ರೋಡ್‌ಶೋ ನಡೆಸಲಿದ್ದಾರೆ. ಇದು ಮಲ್ಲೇಶ್ವರಂನಲ್ಲೂ ಬರಲಿದ್ದು, ಕ್ಷೇತ್ರದ ಹತ್ತಾರು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಕ್ಷೇತ್ರದ ಮತದಾರರ ಮಹತ್ವದ ಆಸೆ ಈಡೇರುತ್ತಿದೆ. ಈ ಮೂಲಕ ಬಿಜೆಪಿ ಇತಿಹಾಸವನ್ನು ನಿರ್ಮಿಸುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ವಾರ್ಡ್ ನಂ.35, 36, 45 ಮತ್ತು 64ರ ವ್ಯಾಪ್ತಿಯ ಬಿಜೆಪಿ ಬೂತ್‌ಗಳ ಅಧ್ಯಕ್ಷರ ಜತೆ ಸಭೆ ನಡೆಸಿ, ಚುನಾವಣಾ ಕಾರ್ಯತಂತ್ರ ಕುರಿತು ಚರ್ಚಿಸಿದರು. ಪ್ಯಾಲೇಸ್‌ ಗುಟ್ಟಹಳ್ಳಿ ವಾರ್ಡಿನ ಕಾಂಗ್ರೆಸ್ ಮುಖಂಡರಾದ ಹಾಲು ಸುರೇಶ್‌, ನಾಗಣ್ಣ ಮತ್ತು ರಮೇಶ್‌ ಅವರು ಬಿಜೆಪಿ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ್‌ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಇದ್ದರು.

RELATED ARTICLES

Related Articles

TRENDING ARTICLES