ಬೆಂಗಳೂರು : ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಕಾರನ್ನು ಬಿಟ್ಟು ಖಾಸಗಿ ಕಾರು ಹತ್ತಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇಂದಿನಿಂದ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳುವಂತಿಲ್ಲ. ವಿಪಕ್ಷ ನಾಯಕರಿಗೆ ಕೊಟ್ಟಿರುವ ಸರ್ಕಾರಿ ಕಾರನ್ನು ಅಧಿಕಾರಿಗಳು ವಾಪಸ್ ಪಡೆದಿದ್ದಾರೆ.
ಇನ್ನೂ, ಸರ್ಕಾರಿ ಕಾರನ್ನು ಬಿಟ್ಟ ಸಿದ್ದರಾಮಯ್ಯ ಖಾಸಗಿ ಕಾರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಆದರೆ, ಭದ್ರತಾ ವ್ಯವಸ್ಥೆಯನ್ನು ಹಾಗೇ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.
ಸಚಿವ ಗೋವಿಂದ ಎಂ. ಕಾರಜೋಳ ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನ ಮೊರೆ ಹೋಗಿದ್ದಾರೆ. ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನಕ್ಕೆ ಲಗೇಜ್ ಶಿಫ್ಟ್ ಮಾಡಿದ್ದಾರೆ. ಯಲಬುರ್ಗಾ ದಲ್ಲಿ ನಡೆಯುವ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಚುನಾವಣಾ ಅಧಿಕಾರಿಗಳು ಕಾರಜೋಳ ಅವರ ಸರ್ಕಾರಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಸಿಎಂ ಬೊಮ್ಮಾಯಿ ಮನೆಗೆ ದೌಡು
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ಮನೆಗೆ ಬಿಜೆಪಿ ನಾಯಕರು ದಾಂಗುಡಿ ಇಟ್ಟಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಚುನಾವಣೆ ದಿನಾಂಕ ಹಾಗೂ ಚುನಾವಣಾ ಸಿದ್ದತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನೂ ಸಚಿವ ಮುನಿರತ್ನ, ವಿ.ಸೋಮಣ್ಣ ಖಾಸಗಿ ಕಾರಿನಲ್ಲಿ ಆಗಮಿಸಿದ್ದಾರೆ.