Friday, April 19, 2024

ಎಕ್ಸ್ ಪ್ರೆಸ್ ವೇ ಜಲಾವೃತ : ಪ್ರತಾಪ್ ಸಿಂಹ, ಸಿಟಿ ರವಿ ಬಂದು ಈಜು ಹೊಡಿಲಿ

ಬೆಂಗಳೂರು : ಕಳೆದ ವಾರವಷ್ಟೇ ಉದ್ಘಾಟನೆಗೊಂಡಿದ್ದ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ತಡರಾತ್ರಿ ಸುರಿದ ಮಳೆಗೆ ಜಲಾವೃತವಾಗಿದೆ. ಇತ್ತ, ಆಕ್ರೋಶ ಹೊರಹಾಕಿರುವ ಸ್ಥಳೀಯರು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಸಿ.ಟಿ ರವಿ ಬಂದು ಈಜು ಹೊಡೆಯಲಿ ಎಂದು ಹೇಳಿದ್ದಾರೆ.

ರಾಮನಗರ ಸಮೀಪದ ಸಂಘಬಸವನದೊಡ್ಡಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಸಿದೆ. ಇಂದು ಮುಂಜಾನೆಯಿಂದಲೂ ವಾಹನ ಸವಾರರು ಪರದಾಟ ನಡೆಸಿದ್ದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲ ವಾಹನಗಳು ಕೆಟ್ಟು ನಿಂತಿದ್ರೆ, ಮತ್ತೆ ಕೆಲವಾಹನಗಳು ಜಖಂ ಆಗಿವೆ‌.

ತಡರಾತ್ರಿ ಸುರಿದ ಮಳೆಗೆ ಜಲಾವೃತ

ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆಯಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಬಣ್ಣ ಒಂದೇ ವಾರಕ್ಕೆ ಬಯಲಾಗಿದೆ. ತಡರಾತ್ರಿ ಸುರಿದ ಮಳೆಯಿಂದ ರಾಮನಗರ ತಾಲೂಕಿನ ಸಂಗಬಸವನದೊಡ್ಡಿಯ ಬಳಿಯ ಹೆದ್ದಾರಿಯ ಕೆಳಸೇತುವೆಯಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.

ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ

ಮಳೆ ನೀರಿಗೆ ಕೆಟ್ಟುನಿಂತ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದರು ಯಾರೊಬ್ಬರು ನೆರವಿಗೆ ಬಂದಿಲ್ಲಎಂದು ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಬಾರಿ ಟೋಲ್‌ ಕಟ್ಟಿದರೂ ಸರಿಯಾದ ವ್ಯವಸ್ಥೆ ಇಲ್ಲ, ಹೆದ್ದಾರಿ ಕ್ರೆಡಿಟ್ ಗಾಗಿ ಕಿತ್ತಾಡುವ ರಾಜಕೀಯ ನಾಯಕರು ಸಮಸ್ಯೆ ಎದುರಾದಾಗ ಸ್ಥಳಕ್ಕೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನೂ ಕಳೆದ ವರ್ಷ ಕೂಡ ಎಕ್ಸ್‌ಪ್ರೆಸ್‌ ವೇ ನಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಕಷ್ಟು ವಾಹನಗಳು ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿತ್ತು. ಆಗ ಕಾಮಗಾರಿ ಪ್ರಗತಿ ಹಂತದಲ್ಲಿದೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಧಿಕಾರಿಗಳು ಸಬೂಬು ಹೇಳಿದ್ದರು. ಆದರೆ, ಇದೀಗ ಮತ್ತೆ ಅದೇ ಸ್ಥಳದಲ್ಲಿ ನೀರು ನಿಂತಿರೋದು ಅವೈಜ್ಞಾನಿಕ ಕಾಮಗಾರಿಗೆ ಸಾಕ್ಷಿಯಾಗಿವೆ. ಉದ್ಘಾಟನೆಯಾದ ಒಂದೇ ವಾರಕ್ಕೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

RELATED ARTICLES

Related Articles

TRENDING ARTICLES