ಬೆಂಗಳೂರು : ಮಾರ್ಚ್ 17.. ಈ ವರ್ಷ ಕನ್ನಡಿಗರಿಗೆ ಸ್ಪೆಷಲ್ ಡೇ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ, ನಾಳೆ ನಟ ಪುನೀತ್ ರಾಜ್ ಕುಮಾರ್ ಜನ್ಮದಿನ. ಮತ್ತೊಂದೆಡೆ, ಕಬ್ಜ ಸಿನಿಮಾ ಬಿಡುಗಡೆ ಹಾಗೂ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ‘ಕಾಂತಾರ’ ಸಿನಿಮಾ ಪ್ರದರ್ಶನ.
ಹೌದು, ಕನ್ನಡಿಗರಿಗೆ ಇದಕ್ಕಿಂತ ಸ್ಪೆಷಲ್ ಟ್ರೀಟ್ ಮತ್ತೊಂದು ಇದೆಯೇ? ನಾಳೆ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಕನ್ನಡದ ‘ಕಾಂತಾರ’ ಸಿನಿಮಾ ಪ್ರದರ್ಶನವಾಗುತ್ತಿದೆ. ಬಳಿಕ ಕಾಡಂಚಿನ ಜನರ ಸಮಸ್ಯೆ ಕುರಿತು ಚಿತ್ರದ ನಿರ್ದೇಶಕ, ವಿಶ್ವಸಂಸ್ಥೆಯ ಸಾಂಸ್ಕೃತಿಕ ವಿಭಾಗದ ಭಾರತೀಯ ರಾಯಭಾರಿಯೂ ಆಗಿರುವ ರಿಷಬ್ ಶೆಟ್ಟಿ ಅವರು ಕನ್ನಡದಲ್ಲೇ ಮಾತನಾಡಿ ಗಮನ ಸೆಳೆಯಲಿದ್ದಾರೆ.
ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಈ ಸಭೆಯಲ್ಲಿ ಕನ್ನಡದ ಹೆಮ್ಮೆಯ ನಿರ್ದೇಶಕ, ನಟ, ನಿರ್ಮಾಪಕ ರಿಷಬ್ ಶೆಟ್ಟಿ ಕೂಡ ಪಾಲ್ಗೊಳ್ಳುತ್ತಿದ್ದಾರೆ. ವಿವಿಧ ದೇಶಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿ ಹಲವು ವಿಷಯಗಳ ಕುರಿತು ಮಾತನಾಡಲಿದ್ದಾರೆ. ನಟ ರಿಷಬ್ ಕೂಡ ಪ್ರಚಲಿತ ವಿದ್ಯಮಾನಗಳ ಕುರಿತು ಮತ್ತು ಕಾಂತಾರ ಚಿತ್ರದ ಕುರಿತು ವಿಷಯ ಮಂಡಿಸಲಿದ್ದಾರೆ.
ಇದನ್ನೂ ಓದಿ : 4 ಸಾವಿರ ಸ್ಕ್ರೀನ್ಸ್ ನಲ್ಲಿ ‘ಕಬ್ಜ’ ಹಬ್ಬ
ಮೊದಲ ಕನ್ನಡಿಗ ಎಂಬ ಕೀರ್ತಿ
ಸಾಮಾನ್ಯವಾಗಿ ಈ ಸಭೆಯಲ್ಲಿ ಹೆಚ್ಚು ಇಂಗ್ಲಿಷ್ ಭಾಷೆಯನ್ನು ಬಳಸುವುದು ವಾಡಿಕೆ. ಆದರೆ, ರಿಷಬ್ ಈ ಸಭೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ. ಈ ಮೂಲಕ ಕನ್ನಡದಲ್ಲಿ ಭಾಷಣ ಮಾಡಿದ ಮೊದಲ ಕನ್ನಡಿಗ ಎಂಬ ಕೀರ್ತಿಗೂ ಪಾತ್ರರಾಗಲಿದ್ದಾರೆ. ಈಗಾಗಲೇ ಈ ಸಭೆಯಲ್ಲಿ ಸದ್ಯ ಜಗತ್ತು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ರಿಷಬ್ ಯಾವೆಲ್ಲ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿ ಘಟಕವು ರಿಷಬ್ ಶೆಟ್ಟಿ ಕುರಿತು ಟ್ವಿಟ್ ಮಾಡಿದ್ದು, ಖಚಿತಪಡಿಸಿದೆ. ಕಾಂತಾರ ಚಿತ್ರವು 2022ರ ಸೆಪ್ಟಂಬರ್ 30ರಂದು ತೆರೆಕಂಡು ಭರ್ಜರಿ ಯಶಸ್ಸು ಕಂಡಿತ್ತು.